suddibindu.in
ಕಾರವಾರ : ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಿರುವುದು ಜನವಿರೋಧಿ ಕ್ರಮ ಎಂದು ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಕಿಡಿಕಾರಿದ್ದಾರೆ.
ಮೊದಲೇ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿರುವಾಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿ ಅವರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲಾರದೆ ಪರದಾಡುತ್ತಿರುವ ಸರ್ಕಾರ ಈಗ ಸಂಪನ್ಮೂಲ ಕ್ರೂಢೀಕರಣಕ್ಕೆ ಏನೆಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಬಹುದೋ ಅವೆಲ್ಲ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗಿ ಇತರ ಎಲ್ಲ ವಸ್ತುಗಳ ಬೆಲೆಗಳಲ್ಲಿ ಮತ್ತೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ
- ED ಬಂಧನಕ್ಕೆ ಒಳಗಾದ ಶಾಸಕ ಸತೀಶ್ ಸೈಲ್ ಸೆಪ್ಟೆಂಬರ್ 12ರವರೆಗೆ ಕಸ್ಟಡಿ
- Karwar Krims Hospital /ಉತ್ತರ ಕನ್ನಡಕ್ಕೆ ಹೆಮ್ಮೆ: 450ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಕಟ್ಟಡ ಸಿದ್ಧ
- Gold price today /ಚಿನ್ನದ ದರದಲ್ಲಿ ದಾಖಲೆ ಏರಿಕೆ : ಖರೀದಿದಾರರಿಗೆ ಶಾಕ್, ಹೂಡಿಕೆದಾರರಿಗೆ ಚಾನ್ಸ್
ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಆದರೆ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಾಗಿ ಬೆಲೆಗಳ ಹೆಚ್ಚಳದ ಹೊರೆಯನ್ನು ಜನರ ಮೇಲೆ ಹೇರುತ್ತಿದೆ. ಒಂದು ಕೈಯಿಂದ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಿಂದ ಕೊಟ್ಟಿರುವುದಕ್ಕಿಂತ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡುತ್ತಿದೆ. ಅಷ್ಟಕ್ಕೂ ಗ್ಯಾರಂಟಿ ಯೋಜನೆ ಸಹ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ನಿಮಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬೆಲೆ ಹೆಚ್ಚಳವನ್ನು ಕೈಬಿಡಿ.
ಬೆಲೆ ಹೆಚ್ಚಳದ ಸರ್ಕಾರದ ಕ್ರಮವನ್ನು ಖಂಡಿಸಿ ಸೋಮವಾರ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಜನರ ಪರವಾಗಿ ಧ್ವನಿ ಎತ್ತಿದೆ. ಸರ್ಕಾರದ ಬೆಲೆ ಹೆಚ್ಚಳದ ನೀತಿಯಿಂದಾಗಿ ಜನಸಾಮಾನ್ಯರು, ಮಧ್ಯಮ ವರ್ಗದವರ ಬದುಕು ಅಸಹನೀಯವಾಗಿದೆ. ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಈ ಜನವಿರೋಧಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.