suddibindu.in
ಶಿರಸಿ: ಎರಡು ವರ್ಷಗಳಿಗೊಮ್ಮೆ ನಡೆಯುವ ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿರುವ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆ ಮಾರ್ಚ್ 19ರಿಂದ 27ರ ವರೆಗೆ ನಡೆಯಲಿದೆ.
ಶ್ರೀಮಾರಿಕಾಂಬಾ ದೇವಾಲಯದ ಎದುರು ಶ್ರೀದೇವಿಯ ರಥದ ನಿರ್ಮಾಣವು ಪ್ರಮುಖ ಹಂತ ತಲುಪಿದೆ. ರಥದ ಪ್ರಮುಖ ಭಾಗವಾದ ಕಲಶ ಕಂಬ ಜೋಡಣೆ ಕಾರ್ಯ ಭಾನುವಾರ ನಡೆಯಿತು. ರಥದ ತಳಹದಿಯಲ್ಲಿ ಗಾಲಿ ಜೋಡಣೆ, ಮರದ ತೊಲೆ, ಹಲಗೆಗಳ ಜೋಡಣೆಯ ಕೆಲಸ ನಡೆದಿದ್ದು, ತಲೆತಲಾಂತ ರದಿಂದ ವಂಶಪಾರಂಪರ್ಯವಾಗಿ ಶ್ರೀದೇವಿಯ ರಥ ನಿರ್ಮಾಣ ಕಾರ್ಯ ನಿರ್ವಹಿಸುವ ಬಂಡಲದ ಮರಾಠಿ ಕುಟುಂಬದವರು ತಮ್ಮ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:-
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ರಥದ ತಳ ಭಾಗದ ಜೋಡಣೆ, ಶ್ರೀದೇವಿಯ ರಥಾರೋಹಣ ಹಾಗೂ ರಥೋತ್ಸವದಲ್ಲಿ ಶ್ರೀದೇವಿಯ ಪ್ರತಿಷ್ಠಾಪಿತಳಾಗಿ ಜಾತ್ರಾ ಗದ್ದುಗೆಗೆ ಸಾಗಲು ಅಗತ್ಯ ಅಟ್ಟಣಿಗೆ ನಿರ್ಮಾಣ ನಡೆಸಲಾಗುತ್ತಿದೆ.ಮಾ. 19 ರಂದು ಮಂಗಳವಾರ ನಿಗದಿತ ಮುಹೂರ್ತದಲ್ಲಿ ಕಲಶ ಪ್ರತಿಷ್ಠಾಪನೆ, ನಂತರ ಬಣ್ಣಬಣ್ಣದ ಪತಾಕೆಗಳನ್ನು ಜೋಡಿಸಿ ಅಲಂಕರಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ.
ಜಾತ್ರಾ ಪೇಟೆಯಲ್ಲಿ ವಹಿವಾಟು ನಡೆಸುವ ಅಂಗಡಿಗಳಿಗಾಗಿ ದೇವಾಲಯದಿಂದ ನೀಡುವ ಜಾತ್ರಾ ಗದ್ದುಗೆಯ ಪರಿಸರದ ಪ್ಲಾಟುಗಳ ಹರಾಜು ಮುಕ್ತಾಯವಾಗಿದೆ. ಆದರೆ ನಗರಸಭೆಯಿಂದ ನೀಡುವ ನಗರದ ಪ್ರಮುಖ ರಸ್ತೆಗಳಲ್ಲಿನ ಸ್ಥಳಗಳಲ್ಲಿನ ಹರಾಜು ಪ್ರಕ್ರಿಯೆಯು ಭಾನುವಾರವೂ ನಡೆದಿದ್ದು, ಇಂದು ಕೋಟೆಕೆರೆ ಭಾಗದಲ್ಲಿ ಹರಾಜು ನಡೆಯಲಿದೆ.
ಜಾತ್ರಾ ಪೇಟೆಯಲ್ಲಿ ಈಗಾಗಲೇ ವ್ಯವಹಾರ ನಡೆಸಲು ಖರೀದಿಸಿರುವ ಪ್ಲಾಟ್‌ಗಳಲ್ಲಿ ಜಾತ್ರಾ ವಹಿವಾಟಿನ ಅಂಗಡಿಗಳ ಮತ್ತು ಅಮ್ಯೂಸ್‌ಮೆಂಟ್‌ಗಳ ಜೋಡಣೆಯ ಕೆಲಸ ಭರದಿಂದ ಸಾಗಿದೆ. ದಿನದಿಂದ ದಿನಕ್ಕೆ ಜಾತ್ರಾ ಪೇಟೆಯಲ್ಲಿ ಕಾರ್ಯಗಳು ಹೆಚ್ಚೆಚ್ಚು ಚುರುಕಿನಿಂದ ನಡೆಯುತ್ತಿದ್ದು, ವಿವಿಧ ಅಂಗಡಿ, ಮಳಿಗೆಗಳಿಂದ ಕೂಡಿದ ಕಣ್ಣೆಳೆಯುವ ಪೇಟೆಯು ರೂಪುಗೊಳ್ಳುತ್ತಿದೆ.