ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಮ್ಮ ವೈಯಕ್ತಿಕ ವಿಶೇಷ ದಿನಗಳನ್ನು ಕುಟುಂಬದೊಂದಿಗೆ ಆಚರಿಸಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ದಿನ ರಜೆ ಕೋರುವ ಪೊಲೀಸ್ ಸಿಬ್ಬಂದಿಗೆ ರಜೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರು (ಡಿಜಿ–ಐಜಿಪಿ) ಡಾ. ಎಂ.ಎ. ಸಲೀಂ ಅವರು ಸೂಚನೆ ನೀಡಿದ್ದಾರೆ.

ಈ ಸಂಬಂಧ ಹೊರಡಿಸಲಾದ ಸುತ್ತೋಲೆಯಲ್ಲಿ, ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದರೆ, ಅದನ್ನು ನಿರಾಕರಿಸದೆ ಮಂಜೂರು ಮಾಡಬೇಕು ಎಂದು ಎಲ್ಲಾ ಘಟಕಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಪೊಲೀಸ್ ಸಿಬ್ಬಂದಿ ದಿನನಿತ್ಯ ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆಯನ್ನು ಅತ್ಯಂತ ಒತ್ತಡದ ಪರಿಸ್ಥಿತಿಗಳಲ್ಲೇ ನಿರ್ವಹಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ವೈಯಕ್ತಿಕ ಜೀವನಕ್ಕೂ ಸಮಯ ನೀಡುವುದು ಅಗತ್ಯವಾಗಿದ್ದು, ವಿಶೇಷ ದಿನಗಳಲ್ಲಿ ರಜೆ ದೊರಕುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯಲು ಸಹಕಾರಿಯಾಗುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ರಜೆ ನೀಡುವುದರಿಂದ ಸಿಬ್ಬಂದಿಯ ಮನೋಬಲ ಹೆಚ್ಚಾಗುತ್ತದೆ, ಕೆಲಸದ ಮೇಲೆ ಆಸಕ್ತಿ ಹಾಗೂ ಕಾರ್ಯಕ್ಷಮತೆ ವೃದ್ಧಿಯಾಗುತ್ತದೆ. ಜೊತೆಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಸಾಧಿಸಲು ಸಹ ಇದು ನೆರವಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆ, ಇಂತಹ ರಜೆ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ಮಂಜೂರು ಮಾಡುವಂತೆ ಡಿಜಿ–ಐಜಿಪಿ ಅವರು ಘಟಕಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ/ಕುಮಟಾ ಸಮೀಪ KSRTC ಬಸ್–ಪಿಕ್‌ಅಪ್ ವಾಹನ ಡಿಕ್ಕಿ: ಚಾಲಕ ಗಂಭೀರ