ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ವೈದ್ಯ ರಾಜು ಪಿಕ್ಳೆ ಅವರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತ ವಿಡಿಯೋ ವೈರಲ್ ಮಾಡಿದ್ದ ಮೂವರು ಆರೋಪಿತರನ್ನು ಅಂಕೋಲಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ್, ಹರಿಶ್ಚಂದ್ರ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದವರಾದ ಈ ಮೂವರು, ಹದಿನೈದು ದಿನಗಳ ಹಿಂದೆ ರಾಜು ಪಿಕ್ಳೆ ಅವರು ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು ಎನ್ನಲಾಗಿದೆ.

ವೈರಲ್ ಆದ ವಿಡಿಯೋದಲ್ಲಿ, ವೈದ್ಯ ರಾಜು ಪಿಕ್ಳೆ ಅವರು ರೋಗಿಗೆ ಅವಧಿ ಮೀರಿದ ಮಾತ್ರೆ ನೀಡಿರುವುದನ್ನು ಪ್ರಶ್ನಿಸಿರುವ ದೃಶ್ಯಗಳು ಇದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ಈ ಘಟನೆ ಕಣ್ತಪ್ಪಿನಿಂದ ನಡೆದದ್ದು ಎಂದು ರಾಜು ಪಿಕ್ಳೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಆದರೂ ಕೂಡ ವಿಡಿಯೋ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದರಿಂದ ಮಾನಸಿಕವಾಗಿ ನೊಂದಿದ್ದ ವೈದ್ಯ ರಾಜು ಪಿಕ್ಳೆ ಅವರು, ನಿನ್ನೆ ತಮ್ಮ ನಿವಾಸವಾದ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ದಾರುಣ ಘಟನೆಗೆ ಕಾರಣವಾದ ವಿಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಂಕೋಲಾ ಪೊಲೀಸರು, ತ್ವರಿತ ತನಿಖೆ ನಡೆಸಿ ವಿಡಿಯೋ ಹರಡಿದ ಆರೋಪದ ಮೇರೆಗೆ ಮೂವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣವು ವೈದ್ಯ ವೃತ್ತಿಯಲ್ಲಿ ಇರುವವರ ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ/ಗೆಳೆಯರೇ ಕೊಲೆಗಾರರೇ..? ಕಾರು ಬೆಂಕಿ ಪ್ರಕರಣದಲ್ಲಿ ಸಜೀವ ದಹನ ಬಯಲು..!