ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಕಡತೋಕಾ–ಮಾಡಗೇರಿ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ಹಾಗೂ ಸಮಾಜಸೇವಕ ಶಂಕರ ವೆಂಕಟ್ಟಪ್ಪ ನಾಯ್ಕ (84) ಅವರು ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ವಿಧಿವಶರಾಗಿದ್ದಾರೆ.
ಮೃತರು ವರದಿಗಾರ ಕಡತೋಕಾ ಮಂಜು ಅವರ ತಂದೆಯಾಗಿದ್ದು, ಪತ್ನಿ, ಓರ್ವ ಪುತ್ರ, ಇಬ್ಬರೂ ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಶಂಕರ ನಾಯ್ಕ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ್ ವ್ಯಾಪ್ತಿಯ ಕೊಡಸಾರ, ಸೋಮಸಾಗರ, ಹೆಬ್ಬಳ್ಳೆಕೊಪ್ಪ ಮೊದಲಾದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ಕಾಲ್ನಡಿಗೆಯಲ್ಲೇ ದೂರದೂರಿನ ಶಾಲೆಗಳಿಗೆ ತೆರಳಿ ಮಕ್ಕಳಿಗೆ ವಿದ್ಯೆ ನೀಡಿದ ಶಿಕ್ಷಕರಾಗಿ ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದರು.
ಶಿಕ್ಷಕರಾಗಿರುವುದರ ಜೊತೆಗೆ ಕಲೆ ಹಾಗೂ ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದವರು. ಪರಿವರ್ತನೆ ನಾಟಕವನ್ನ ಕೂಡ ಅವರು ಬರೆದು ಪ್ರದರ್ಶಿಸಿದ್ದರು, ನಾಟಕ, ಯಕ್ಷಗಾನ ರಂಗನಿರ್ದೇಶಕರಾಗಿದ್ದು, ನಾಮಧಾರಿ ಸೇವಾ ಸಂಘದ ಸಂಸ್ಥಾಪಕರು, ಊರಕೇರಿ ಪ್ರೌಢಶಾಲೆಯ ಸಂಸ್ಥಾಪಕರು ಹಾಗೂ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದ ಸ್ಥಾಪಕರಾಗಿದ್ದರು. ಯಕ್ಷಗಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಅನೇಕ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು.
ಶಿಕ್ಷಕರಿಗೆ ತಮ್ಮ ಮನೆಯಲ್ಲೇ ಊಟದ ವ್ಯವಸ್ಥೆ ಮಾಡಿಕೊಟ್ಟು ಮಾನವೀಯ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿಯ ನಂತರವೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಾಡಗೇರಿಯ ರಾಮನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕುಮಟಾದ ಶ್ರೀ ಮಾತಾವೈಭ ಮಹಾಲಕ್ಷ್ಮೀ ಕ್ರೆಡಿಟ್ ಸೌಹಾರ್ದ ನಿಯಮಿತ ಬ್ಯಾಂಕ್ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಅನೇಕ ಗಣ್ಯರು, ಶಿಕ್ಷಕರು, ಶಿಷ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ/ಕುಮಟಾದಲ್ಲಿ ಪುಡಿ ರೌಡಿಯಿಂದ ನಡು ರಸ್ತೆಯಲ್ಲೇ ರಂಪಾಟ-ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ




