ಕನ್ನಡ ಕಿರುತೆರೆಯ ಅತಿ ಹೆಚ್ಚು ವೀಕ್ಷಣೆ ಪಡೆಯುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12 ಇದೀಗ ಅಂತಿಮ ಹಂತದತ್ತ ಸಾಗುತ್ತಿದ್ದು, ಈ ಬಾರಿ ಕಾರ್ಯಕ್ರಮ ಹೊಸ ಇತಿಹಾಸವನ್ನು ನಿರ್ಮಿಸಿದೆ.
ಹಿಂದಿನ ಯಾವುದೇ ಸೀಸನ್ಗಳಲ್ಲಿ ಕಾಣದ ವಿಶಿಷ್ಟ ಬೆಳವಣಿಗೆ ಈ ಬಾರಿ ನಡೆದಿದ್ದು, ಟಾಪ್-4 ಪಟ್ಟಿಯಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆಯುವ ಮೂಲಕ ಮಹಿಳಾ ಶಕ್ತಿಗೆ ಹೊಸ ಗೌರವ ತಂದಿದ್ದಾರೆ.
ಸುಮಾರು 16 ವಾರಗಳ ಕಾಲ ನಡೆದ ಪೈಪೋಟಿಯಲ್ಲಿ ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದೀಗ ಫಿನಾಲೆ ಹಂತ ತಲುಪಿರುವ ನಾಲ್ವರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಶೈವ ಎಂಬ ಮೂವರು ಮಹಿಳಾ ಸ್ಪರ್ಧಿಗಳು ಉಳಿದಿದ್ದಾರೆ. ಪುರುಷ ಸ್ಪರ್ಧಿಗಳ ಪೈಕಿ ಗಿಲ್ಲಿ ನಟ ಒಬ್ಬರೇ ಅಂತಿಮ ಹೋರಾಟದಲ್ಲಿದ್ದಾರೆ.
ಇದರಿಂದ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಟಾಪ್-4ನಲ್ಲಿ ಗರಿಷ್ಠ ಮಹಿಳಾ ಪ್ರತಿನಿಧಿತ್ವ ಕಂಡ ಸೀಸನ್ ಎಂಬ ಹೆಗ್ಗಳಿಕೆಗೆ ಸೀಸನ್ 12 ಪಾತ್ರವಾಗಿದೆ.
ಫಿನಾಲೆಗೆ ಅರ್ಹರಾಗಿದ್ದ ಆರು ಮಂದಿಯಲ್ಲಿ ಧನುಷ್ ಗೌಡ ಹಾಗೂ ಮ್ಯೂಟೆಂಟ್ ರಘು ಹೊರಬಿದ್ದ ಬಳಿಕ, ಮನೆ ಸಂಪೂರ್ಣವಾಗಿ ಮಹಿಳಾ ಸ್ಪರ್ಧಿಗಳ ಪ್ರಾಬಲ್ಯದಲ್ಲಿರುವಂತೆ ಕಾಣಿಸುತ್ತಿದೆ. ಇದರೊಂದಿಗೆ ಗಿಲ್ಲಿ ನಟ ಮಹಿಳಾ ಸ್ಪರ್ಧಿಗಳ ನಡುವೆ ಏಕೈಕ ಪುರುಷನಾಗಿ ಉಳಿದುಕೊಂಡಿರುವುದು ಫೈನಲ್ ಹೋರಾಟವನ್ನು ಇನ್ನಷ್ಟು ರೋಚಕವಾಗಿಸಿದೆ.
ಬಿಗ್ ಬಾಸ್ ಸೀಸನ್ 3ರಲ್ಲಿ ನಟಿ ಶ್ರುತಿ ಟ್ರೋಫಿ ಗೆದ್ದ ನಂತರ ಮಹಿಳಾ ಸ್ಪರ್ಧಿಗೆ ಕಪ್ ಸಿಕ್ಕಿಲ್ಲ. ಆದರೆ ಈ ಬಾರಿ ಸ್ವತಃ ಶ್ರುತಿ ಅವರು ಮನೆಗೆ ಎಂಟ್ರಿ ನೀಡಿ ರಘು ಅವರನ್ನು ಹೊರಗೆ ಕರೆದುಕೊಂಡು ಬಂದಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ. ಏಕೈಕ ಮಹಿಳಾ ವಿಜೇತೆಯಾಗಿರುವ ಶ್ರುತಿ ಅವರ ಆಗಮನ, ಈ ಬಾರಿ ಕೂಡ ಮಹಿಳಾ ಸ್ಪರ್ಧಿಯೇ ಟ್ರೋಫಿ ಗೆಲ್ಲುವ ಸಾಧ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ರಾಜ್ಯಾದ್ಯಂತ ಭಾರಿ ಅಭಿಮಾನಿ ಬಳಗ ಹೊಂದಿರುವ ಗಿಲ್ಲಿ ನಟ ಮತದಾನದ ಪೈಪೋಟಿಯಲ್ಲಿ ಮುನ್ನಡೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಬಿಗ್ ಬಾಸ್ ಇತಿಹಾಸದ ಟ್ರೆಂಡ್ ಹಾಗೂ ಈ ಬಾರಿ ಕಂಡುಬಂದ ಮಹಿಳಾ ಪ್ರಾಬಲ್ಯವನ್ನು ಗಮನಿಸಿದರೆ,
ಕಪ್ ಮಹಿಳಾ ಸ್ಪರ್ಧಿಯ ಪಾಲಾಗುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.ಇದೀಗ ಎಲ್ಲರ ಗಮನ ಫಿನಾಲೆಯತ್ತ ನೆಟ್ಟಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ಟ್ರೋಫಿಯನ್ನು ಯಾರು ಎತ್ತಿಕೊಳ್ಳುತ್ತಾರೆ ಎಂಬ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ.


