ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಶಾಲಾ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಓಮಿನಿ ವಾಹನ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಡಾ. ಎ.ವಿ. ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಓಮಿನಿಯಲ್ಲಿ ಪ್ರಯಾಣಿಸುತ್ತಿದ್ದ ಐದು ವಿದ್ಯಾರ್ಥಿಗಳ ಪೈಕಿ ನಾಲ್ವರಿಗೆ ಗಾಯಗಳಾಗಿದ್ದು, ಚಾಲಕ ಸೇರಿ ಒಟ್ಟು ಐವರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ತನಿಷ್ಕ (15), ಅದ್ವಿತ್ (12), ಅರ್ಜುನ್ (13) ಹಾಗೂ ಆಯಿರಾ (10) ಎಂದು ಗುರುತಿಸಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓಮಿನಿ ಚಾಲಕ ಜಟ್ಟಿ ಪರಮೇಶ್ವರ ಮುಕ್ರಿ ಅವರಿಗೂ ಗಾಯಗಳಾಗಿವೆ. ಚಾಲಕನಿಗೆ ತಲೆ ಸುತ್ತು ಬಂದ ಪರಿಣಾಮ ವಾಹನದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಬೊಲೆರೊ ವಾಹನಕ್ಕೆ ಗುದ್ದಿದ ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ನುಜ್ಜುಗುಜ್ಜಾಗಿದೆ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಗಾಯಾಳುಗಳನ್ನು ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ/ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ರಸ್ತೆ ಅಪಘಾತ: ಅಗ್ನಿಶಾಮಕ ದರಳದ‌ಸಿಬ್ಬಂದಿಗೆ ಗಂಭೀರ ಗಾಯ