ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ ಹಾಗೂ ಬೇಡ್ತಿ ನದಿಗಳನ್ನು ತಿರುವು ಮಾಡಿ ಜೋಡಣೆ ಮಾಡುವ ಸರ್ಕಾರದ ಯೋಜನೆಗೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಇಡೀ ಜಿಲ್ಲೆಗೆ ಮಾರಕವಾಗಲಿದೆ ಮಠಾಧೀಶರು, ಜನಪ್ರತಿನಿಧಿಗಳು, ಸಾರ್ವಜನಿಕರು ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶದ ಮೂಲಕ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಣೆ ಮಾಡುವ ಹಾಗೂ ಬೇಡ್ತಿ ನದಿಯನ್ನು ವರದಾ ನದಿಗೆ ತಿರುವು ಮಾಡುವ ಯೋಜನೆಗೆ ಸರ್ಕಾರ ಮುಂದಾಗಿದ್ದು, ಇದರಿಂದ ಸಾವಿರಾರು ಎಕರೆ ಅರಣ್ಯ ಸಂಪತ್ತಿಗೆ ಭಾರೀ ಹಾನಿಯಾಗಲಿದೆ. ಜೊತೆಗೆ ಕೃಷಿಭೂಮಿ ಮುಳುಗಡೆಯಾಗುವ ಆತಂಕವಿದ್ದು, ಅನೇಕ ಕುಟುಂಬಗಳು ನಿರಾಶ್ರಿತರಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ಯೋಜನೆ ವಿರೋಧಿಸಿ ಘೋಷಣೆ ಕೂಗಿದರು.
ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ–ಸಂಸ್ಥೆಗಳ ಮುಖಂಡರು, ವಿವಿಧ ಮಠಾಧೀಶರು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಮಾವೇಶದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು, ಈ ಯೋಜನೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಬಜೆಟ್‌ನಲ್ಲಿ ಮಂಡನೆಯಾಗಿದ್ದು, ಆಗ ಈಗಿನ ಸಂಸದ ಕಾಗೇರಿ ಅವರು ವಿಧಾನಸಭಾ ಸ್ಪೀಕರ್ ಆಗಿದ್ದರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಸಮಾವೇಶದಲ್ಲಿ ರಾಜಕೀಯ ಆರೋಪ–ಪ್ರತ್ಯಾರೋಪಗಳೂ ನಡೆದವು.
ಸಮಾವೇಶದಲ್ಲಿ ಯೋಜನೆಯಿಂದ ಉಂಟಾಗುವ ಪರಿಸರ, ಕೃಷಿ ಹಾಗೂ ಜನಜೀವನದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಯಾವುದೇ ರಾಜಕೀಯ ಭೇದಭಾವವಿಲ್ಲದೆ ಒಗ್ಗಟ್ಟಿನ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಪಶ್ಚಿಮ ಘಟ್ಟದ ಜೀವನದಿ ಎಂದೇ ಕರೆಸಿಕೊಳ್ಳುವ ಬೇಡ್ತಿ ಮತ್ತು ಅಘನಾಶಿನಿ ನದಿಗಳ ತಿರುವು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಹೋರಾಟಕ್ಕೆ ಚಾಲನೆ ದೊರೆತಿದ್ದು, ಸರ್ಕಾರ ಈ ಕುರಿತು ಯಾವ ನಿಲುವು ತಾಳಲಿದೆ ಎಂಬುದು ಕಾದು ನೋಡಬೇಕಾಗಿದೆ….


