ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಹಶೀಲ್ದಾರ್ ಕಚೇರಿಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ಒಂದು ಮಂಗಳವಾರ ಬೆಳಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಬೆಳಗ್ಗೆ ಸುಮಾರು 7.25ರ ವೇಳೆಗೆ ಕಚೇರಿಯ ಅಧಿಕೃತ ಇಮೇಲ್‌ಗೆ ಈ ಸಂದೇಶ ರವಾನೆಯಾಗಿದ್ದು, ಕಚೇರಿಯಲ್ಲಿ ಶೀಘ್ರದಲ್ಲೇ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಆತಂಕಕಾರಿ ಎಚ್ಚರಿಕೆ ನೀಡಲಾಗಿದೆ.
ಕನ್ನಡದಲ್ಲಿ ಬರೆಯಲಾದ ಈ ಮೇಲ್‌ನಲ್ಲಿ ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು ಎಂಬ ಉಲ್ಲೇಖಗಳಿದ್ದು, ತಕ್ಷಣ ಎಲ್ಲರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ ಎಂಬ ಇಮೇಲ್ ಐಡಿಯಿಂದ ಸಂದೇಶ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಷ್ಟೇ ಅಲ್ಲದೆ, ಇಮೇಲ್‌ನ ಒಳವಿಷಯದಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಆರೋಪಾತ್ಮಕ ಬರಹಗಳೂ ಸೇರಿವೆ. ಕೆಲವು ರಾಜಕೀಯ ತಂತ್ರಜ್ಞರ ಹೆಸರುಗಳನ್ನು ಉಲ್ಲೇಖಿಸಿ, ಹಿಂದಿನ ವರ್ಷಗಳಲ್ಲಿ ಮಾಧ್ಯಮ ಹಾಗೂ ಸಾರ್ವಜನಿಕರ ಮೇಲೆ ನಿಗಾವಹಿಸಲಾಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ. ಜೊತೆಗೆ, ಅನಾಥಾಶ್ರಮಗಳ ಹೆಣ್ಣುಮಕ್ಕಳ ಶೋಷಣೆ ಕುರಿತು ಗಂಭೀರ ಆರೋಪಗಳನ್ನೂ ಈ ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತಕ್ಷಣವೇ ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸಂಪೂರ್ಣ ತಪಾಸಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಈ ಹಿಂದೆ ಭಟ್ಕಳ ನಗರ ಪೊಲೀಸ್ ಠಾಣೆಗೂ ಇಂತಹದ್ದೇ ಬಾಂಬ್ ಬೆದರಿಕೆ ಸಂದೇಶ ಬಂದಿದ್ದ ಪ್ರಕರಣದಲ್ಲಿ ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಇದೇ ರೀತಿಯ ಮೇಲ್ ಬಂದಿರುವುದರಿಂದ ಪೊಲೀಸರು ಗಂಭೀರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ/ಅಮದಳ್ಳಿಯಲ್ಲಿ ತಡರಾತ್ರಿ ಬೆಂಕಿ ಅವಘಡ: ಎರಡು ಕಾರು–ಒಂದು ಆಟೋ ಭಸ್ಮ


