ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಿರ್ಜಾನ ಗ್ರಾಮದಲ್ಲಿ 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಆರೋಪಿತರು ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನ ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದೆ.
ಮೆರವಣಿಗೆಯಲ್ಲಿ ಕೆಲವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಜೋಡಿಸಿ ರಾಷ್ಟ್ರಧ್ವಜದಂತೆ ತಯಾರಿಸಿ, ಅದರ ಮಧ್ಯಭಾಗದಲ್ಲಿ ನಕ್ಷತ್ರ ಹಾಗೂ ಅರ್ಧಚಂದ್ರದ ಚಿತ್ರ ಬಿಡಿಸಿ ಎಲ್ಲರಿಗೂ ಕಾಣುವಂತೆ ಹಾರಿಸಿದ್ದರು. ಈ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 195/2025ರಲ್ಲಿ ರಾಷ್ಟ್ರಧ್ವಜ ಅವಮಾನ ತಡೆ ಕಾಯ್ದೆ 1971ರ ಕಲಂ 2(ಎ), 2(ಎಫ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ತನಿಖೆ ನಡೆಸಿದ ಪಿಎಸ್ಐ ಸುನೀಲ ಬಂಡಿವಡ್ಡರ್ ಅವರು ಆರೋಪಿಗಳಾದ ಮಹಮ್ಮದ್ ಅನೀಶ್ ,
ರೆಹಾನ್ ಜಫ್ರುಲ್ಲಾ ಖಾನ್, ಅಫ್ರಿದ್ @ ಮುಸಾ ಅಬ್ದುಲ್ ಸಮದ್ ಶೇಖ್, ಶಾಫಿಕ್ ಹೈದರ್ ಅಲಿ ಶೇಖ್, ಮಹಮ್ಮದ್ ತಯ್ಯಬ್ ಶಾ ಸರ್ಗಿರೋ ಐದು ಮಂದಿ ಆರೋಪಿತರು ಮಿರ್ಜಾನ ಗ್ರಾಮದವರಾಗಿದ್ದಾರೆ. ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ತಯಾರಿಸಿ ಕುಮಟಾ ನ್ಯಾಯಾಲಯಕ್ಕೆ ಸಲ್ಲಿಸಿಸಲಾಗಿತ್ತು..
ನಂತರ, ಆರೋಪಿತರು 02-12-2024ರಂದು ಮಾನ್ಯ ಹೈಕೋರ್ಟ್ ಧಾರವಾಡ ಪೀಠದಲ್ಲಿ ಕ್ರಿಮಿನಲ್ ಪಿಟಿಷನ್ ಸಂಖ್ಯೆ 103688/2024 ಅಡಿಯಲ್ಲಿ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ, ಮಾನ್ಯ ಹೈಕೋರ್ಟ್ 21-08-2025ರಂದು ತೀರ್ಪು ನೀಡಿದ್ದು, ಆರೋಪಿತರ ಅರ್ಜಿಯನ್ನು ವಜಾ ಮಾಡಿದೆ.
ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಗಿರಿಜಾ ಹಿರೇಮಠ ಅವರು ಸಮರ್ಪಕವಾದ ವಾದ ಮಂಡಿಸಿದ್ದು, ಕುಮಟಾ ಪೊಲೀಸರ ತನಿಖೆ ಹಾಗೂ ದೋಷಾರೋಪಣೆ ಸಮರ್ಪಕವೆಂದು ನ್ಯಾಯಾಲಯ ತಿರ್ಮಾನಿಸಿದೆ. ಹೀಗಾಗಿ ಆರೋಪಿತರ ಅರ್ಜಿ ವಜಾ ಆಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.