ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಶ್ರೀದೇವಿಗೆ ಭಕ್ತರಿಂದ ಕೈಗೊಳ್ಳಲಾದ ಪುಷ್ಪಾಲಂಕಾರ ಗಮನ ಸೆಳೆಯಿತು.
ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆಯ ನಿಮಿತ್ತ ಇಡೀ ದೇವಾಲಯವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ನೀಡಿದ ಲಕ್ಷಾಂತರ ರೂ. ಮೌಲದ್ಯ ಹೂವುಗಳಿಂದ ದೇವಸ್ಥಾನವನ್ನು ಸಿಂಗರಿಸಿ, ಶ್ರೀದೇವಿಯನ್ನು ಪರಿಮಳ ಪುಷ್ಪಗಳಿಂದ ಶೃಂಗರಿಸಲಾಯಿತು. ಭಕ್ತರು ಬೆಳಗ್ಗೆಯಿಂದ ಸಂಜೆ ವರೆಗೂ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮುತೈದೆಯರು ಅರಿಶಿಣ ಕುಂಕುಮ ಸೇವೆ ಗೈದು, ಪರಸ್ಪರ ವಿನಿಮಯ ಮಾಡಿಕೊಂಡರು. ಹೂವಿನ ಅಲಂಕಾರವನ್ನು ದೇವರಹಕ್ಕಲಿನ ಶ್ರೀ ಶಾಂತಿಕಾ ಡೆಕೋರೇರ್ಸ್ ನೇತೃತ್ವದಲ್ಲಿ ಭಕ್ತ ಮಂಡಳಿಯವರು ಕೈಗೊಂಡಿದ್ದರು.
ಶ್ರೀದೇವಿಗೆ ಮಾಡಲಾದ ಪುಷ್ಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಸಂಜೆ ಭಜನೆ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಸಾವಿರಾರು ಭಕ್ತರು ಹೂವಿನ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪುನೀತರಾದರು.