ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಅನೇಕ ದಶಕಗಳ ಕಾಲ ರಾಜ್ಯ ಸಾರಿಗೆ ಸಂಸ್ಥೆ (KSRTC)ಯಲ್ಲಿ ಸೇವೆ ಸಲ್ಲಿಸಿ ಅತ್ಯುತ್ತಮ ಚಾಲಕ ಎಂಬ ಪ್ರಶಸ್ತಿಯೊಂದಿಗೆ 2005ರಲ್ಲಿ ನಿವೃತ್ತರಾಗಿದ್ದ ದೇವರಹಕ್ಕಲದ ಈಶ್ವರ ನಾಯ್ಕ ಅವರು ಇಂದು (ಆಗಸ್ಟ್ 7) ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ಇವರು ಕುಮಟಾ-ಬೆಂಗಳೂರು ಬಸ್ ಚಾಲಕರಾಗಿದ್ದರು. ಬೆಂಗಳೂರಿನಲ್ಲಿ ವಿದ್ಯಾರ್ಥಿ ಮತ್ತು ಉದ್ಯೋಗದಲ್ಲಿದ್ದ ಯುವಕ/ಯುವತಿಯರ ಪಾಲಿಗೆ “ಈಶ್ವರಣ್ಣ” ಎಂದೇ ಖ್ಯಾತರಾಗಿದ್ದರು ಮತ್ತು ಆತ್ಮೀಯರಾಗಿದ್ದರು.
ಕುಮಟಾದ ಪೋಷಕರು ಬೆಂಗಳೂರಿನಲ್ಲಿರುವ ತಮ್ಮ ಮಕ್ಕಳಿಗೆ ಕಳುಹಿಸುತ್ತಿದ್ದ ಮೀನೂಟವನ್ನು ಈಶ್ವರಣ್ಣ ಅಂದು ಅಚ್ಚುಕಟ್ಟಾಗಿ ಸೇರಬೇಕಾದವರಿಗೆ ಮುಟ್ಟಿಸುತ್ತಿದ್ದರು. ಒಂದರ್ಥದಲ್ಲಿ ಈಶ್ವರಣ್ಣ ಕುಮಟಾ ಮತ್ತು ಬೆಂಗಳೂರನ್ನು ಬೆಸೆಯುವ ಕೊಂಡಿಯಾಗಿದ್ದರು.
ಅಕ್ಷರ ಪ್ರೇಮಿಯಾಗಿದ್ದ ಈಶ್ವರಣ್ಣ ಬೆಂಗಳೂರಿಂದ ಬರುವಾಗ ತಪ್ಪದೆ “ಹಾಯ್ ಬೆಂಗಳೂರು” ಪತ್ರಿಕೆಯನ್ನು ತರುತ್ತಿದ್ದರು ಎನ್ನುವುದನ್ನು ಅವರ ಒಡನಾಡಿಗಳು ನೆನೆಯುತ್ತಾರೆ.ಸದಾ ಕ್ರಿಯಾಶೀಲರಾಗಿದ್ದ ಈಶ್ವರಣ್ಣ ಯಾವತ್ತೂ ಮನೆಯಲ್ಲಿ ಖಾಲಿ ಕೂತವರಲ್ಲ, ಏನೂ ಕೆಲಸವಿಲ್ಲದಿದ್ದರೆ ಕೊನೆಗೆ ಮನೆಯ ಹಿತ್ತಲ ಕೆಲಸದಲ್ಲಾದರೂ ತಮ್ಮನ್ನು ತಾವು ತೊಡಗಿಸಿಕೊಂಡು ತೋಟಗಾರಿಕೆಯ ಅನುಭವ ಪಡೆಯುತ್ತಿದ್ದರು.
ನಿವೃತ್ತಿ ನಂತರ ಕೆಲಸವಿಲ್ಲದೆ ಚಡಪಡಿಸಿದ ಈಶ್ವರಣ್ಣ ನಂತರ ತಾವೇ ಒಂದು ಕಾರು ಖರೀದಿಸಿ ಟ್ಯಾಕ್ಸಿ ಮಾಡಿದ್ದರು. ತಮ್ಮ ವಾಹನವನ್ನು ಅತ್ಯಂತ ಶುಚಿಯಾಗಿಡುತ್ತಿದ್ದ ಈಶ್ವರಣ್ಣ, ತಮ್ಮ ಗ್ರಾಹಕರನ್ನು ಅಷ್ಟೇ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು ಎನ್ನುವುದನ್ನು ಅವರ ಟ್ಯಾಕ್ಸಿ ಗ್ರಾಹಕರು ಈಗಲೂ ಸ್ಮರಿಸುತ್ತಾರೆ.
ಶ್ರಮಜೀವಿಯಾಗಿದ್ದ ಈಶ್ವರಣ್ಣ ಚಾಲಕ ವೃತ್ತಿಯಲ್ಲಿ ಅಪಾರ ಅನುಭವ ಹೊಂದಿದ್ದರು. ಈಶ್ವರಣ್ಣ ತಮ್ಮ ಅನುಭವವನ್ನು ಅನೇಕ ಯುವ ಚಾಲಕರಿಗೆ ಧಾರೆಯೆರೆಯುವದರ ಜೊತೆಗೆ ಮಾರ್ಗದರ್ಶಕರೂ ಆಗಿದ್ದರು.ಕಳೆದ ಒಂದು ವರ್ಷದಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಈಶ್ವರಣ್ಣ (78) ಇಂದು ಬೆಳಿಗ್ಗೆ ತಮ್ಮ ಕೊನೆಯುಸಿರು ಚೆಲ್ಲಿದ್ದಾರೆ.
ಪತ್ನಿ, ನಾಲ್ವರು ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಈಶ್ವರಣ್ಣ ಅಗಲಿದ್ದಾರೆ. ಈಶ್ವರಣ್ಣ ಇಂದು ನಮ್ಮಿಂದ ದೂರವಾಗಿದ್ದಾರೆ. ಅದರೆ ಅವರ ದೈಹಿಕ ಶಿಸ್ತು ನಮಗೆಲ್ಲ ಪಾಠವಾಗಿದೆ. ಅವರು ಬಿಡುವಿಲ್ಲದೆ, ದಣಿವಿಲ್ಲದೆ ದುಡಿಯುತ್ತಿದ್ದರು. ಅವರ ಶ್ರಮವನ್ನು ನಾವು ಯಾವತ್ತೂ ಗೌರವಿಸುತ್ತೇವೆ. ಈಶ್ವರಣ್ಣನನ್ನು ಕಳೆದುಕೊಂಡ ಅವರ ಮನೆಯವರಿಗೆ, ಮಕ್ಕಳಿಗೆ ಭಗವಂತ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಈಶ್ವರಣ್ಣನ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ದೇವರಕ್ಕಲದ ಶ್ರೀ ಶಾಂತಿಕಾ ಗೆಳೆಯರ ಬಳಗದ ಅಧ್ಯಕ್ಷ ವಿನಾಯಕ ಹರಿ ನಾಯ್ಕ ಸಂತಾಪ ಸೂಚಿಸಿದ್ದಾರೆ.