ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸುಳ್ಳು ಅಪಪ್ರಚಾರವನ್ನು ಖಂಡಿಸಿ, ಕಾರವಾರದ ತಹಶೀಲ್ದಾರ ಕಚೇರಿ ಎದುರು ಭಾರತೀಯ ಜನತಾ ಪಾರ್ಟಿ ಕಾರವಾರ ಘಟಕದ ವತಿಯಿಂದ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳವು ಕರ್ನಾಟಕದಷ್ಟೇ ಅಲ್ಲದೆ ದೇಶಾದ್ಯಂತ ಕೋಟ್ಯಂತರ ಭಕ್ತಾಧಿಗಳ ಭಕ್ತಿಕೇಂದ್ರವಾಗಿದ್ದು, ಪ್ರತಿದಿನವೂ ಲಕ್ಷಾಂತರ ಮಂದಿ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಹೆಸರಿನಲ್ಲಿ ಕೆಲವರು ಸುಳ್ಳು ಪ್ರಚಾರ ನಡೆಸುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ಬ್ರಿಟೀಷರು ಹಾಗೂ ಪೋರ್ಚುಗೀಸರು ಹಿಂದೂ ದೇವಾಲಯಗಳನ್ನು ನಾಶಮಾಡಿದ ಘಟನೆಗಳನ್ನು ಇತಿಹಾಸದಲ್ಲಿ ಕೇಳಿದ್ದೇವೆ. ಇಂದಿನ ದಿನದಲ್ಲಿ ನಾವೇಲ್ಲಾ ಕಣ್ಣಾರೆ ಕಾಣುವಂತಾಗಿದೆ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕಾದ ಬದಲು, ಹಿಂದೂಗಳ ಮೇಲೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. “ಸಿದ್ಧರಾಮಯ್ಯ ಅವರಿಗೆ ನಿಜವಾಗಿಯೂ ಹಿಂದೂ ಧರ್ಮದ ಗೌರವ ಇದ್ದರೆ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕು. ತಾರತಮ್ಯಕ್ಕೆ ತೊಡಗಬಾರದು.

ಕಾಂಗ್ರೆಸ್ ಸರ್ಕಾರ ಅನಾಮಿಕ ವ್ಯಕ್ತಿಯೊಬ್ಬರ ಆರೋಪದ ಆಧಾರದ ಮೇಲೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ತನಿಖೆ ನಡೆಸಿದರೂ, ಅದರ ಹಿಂದೆ ಇರುವ ದುಷ್ಕೃತ್ಯಕಾರರು ಯಾರು ಎಂಬುದನ್ನು ಜನತೆಗೆ ತಿಳಿಸಿಲ್ಲ. ಅಲ್ಲದೇ ಕೆಪಿಸಿಸಿ ಮೀಡಿಯಾ ಸೆಲ್‌ನವರೇ ಧರ್ಮಸ್ಥಳ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ. ಹಿಂದೂಗಳ ಭಕ್ತಿ ಕೇಂದ್ರವನ್ನು ಅವಮಾನಿಸುವವರನ್ನು ಪತ್ತೆಹಚ್ಚಿ ಶಿಕ್ಷಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ರಾಜ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಗಳನ್ನು ತಡೆಗಟ್ಟುವಲ್ಲಿ ವಿಫಲರಾದ ಕಾರಣ ಜನತೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಪ್ರತಿಭಟನೆ ಮೂಲಕ ಒತ್ತಾಯಿಸಿದೆ.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಎನ್.ಎಸ್.ನರೋನಾ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: Karwar/ ಮಹಾದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಅರವಿಂದ ಗುನಗಿ