ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಪ್ರೀತಿಸಿ ವಿವಾಹವಾಗಿದ್ದ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.
ರಮ್ಯಾ ಸಂಕೇತ ಆಚಾರಿ (24)ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಅತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬಂದಿದೆ. ಹೊನ್ನಾವರ ತಾಲ್ಲೂಕಿನ ಮುಗ್ವಾ ಮೂಲದ ರಮ್ಯಾ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದ ಸಂಕೇತ ಆಚಾರಿ ಎಂಬುವವರನ್ನು ಪ್ರೀತಿಸುತ್ತಿದ್ದು, ಇದೇ ವರ್ಷ ಏಪ್ರಿಲ್ 21 ರಂದು ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದಳು. ಮದುವೆಯಾದ ಬಳಿಕ ದಂಪತಿಗಳು ಅಂಕೋಲಾದ ಹಟ್ಟಿಕೇರಿಯಲ್ಲೇ ವಾಸಿಸುತ್ತಿದ್ದರು.
ಆದರೆ ಆಗಸ್ಟ್ 19 ರಂದು ಬೆಳಿಗ್ಗೆ 10 ರಿಂದ 11 ಗಂಟೆಯ ವೇಳೆಯಲ್ಲಿ ರಮ್ಯಾ ತನ್ನ ಮನೆಯಲ್ಲಿ ಫ್ಯಾನ್ಗೆ ವೇಲ್ನಿಂದ ನೇಣು ಹಾಕಿಕೊಂಡಿದ್ದಳು. ತಕ್ಷಣವೇ ಪತಿ ಸಂಕೇತ ಆಚಾರಿ ಅವಳನ್ನು ಅಂಕೋಲಾ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮಧ್ಯಾಹ್ನ 12.20ಕ್ಕೆ ಪರೀಕ್ಷಿಸಿದಾಗ ಅವಳು ಅದಾಗಲೇ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು.
ಈ ಹಿನ್ನೆಲೆಯಲ್ಲಿ ಮೃತೆಯ ತಂದೆ ಗಣೇಶ ಮನು ಆಚಾರಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳ ಅಕಾಲಿಕ ಹಾಗೂ ಅಸಹಜ ಸಾವಿನಲ್ಲಿ ಸಂಶಯವಿರುವುದಾಗಿ ತಿಳಿಸಿ, ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.