ಸುದ್ದಿಬಿಂದು ಬ್ಯೂರೋ ವರದಿ

ದಾಂಡೇಲಿ : ಕಾಲಿಗೆ ಸರಪಳಿ ಕಟ್ಟಿ ಹೊಲದ ಮಧ್ಯೆ ಇರುವ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕೂಡಿ ಹಾಕಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ  ಮಂಗಳವಾರ ಸಂಜೆ ನಡೆದಿದೆ.

ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ಎಂಬ ಮಾನಸಿಕ ಅಸ್ವಸ್ಥನನ್ನು ಆತನ ಕುಟುಂಬದ ಸದಸ್ಯರೇ ಹೊಲದಲ್ಲಿರುವ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕಾಲಿಗೆ ಸರಪಳಿ ಕಟ್ಟಿ ಕೂಡಿ ಹಾಕಿದ್ದರು.ಈತ ಕೆಲ ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುವಂತಹ ಕೃತ್ಯ ಮಾಡುತ್ತಿರುವ ಹಿನ್ನಲೆಯಲ್ಲಿ ಈತನನ್ನು ಕೂಡಿ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈತನ ತಂದೆ ಅಂಚೆ ಇಲಾಖೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಹಿನ್ನಲೆಯಲ್ಲಿ ಅನುಕಂಪದ ಆಧಾರದಡಿ ಈತ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸಿದ್ದನು.ಆದರೆ ಕೆಲ ವರ್ಷಗಳಿಂದ ಈತ ಮಾನಸಿಕ ಅಸ್ವಸ್ಥನಾಗಿರುತ್ತಾನೆ.ಮಾನಸಿಕ ಅಸ್ವಸ್ಥನಾಗಿರುವ ಹಿನ್ನಲೆಯಲ್ಲಿ ಈತ ಉಪಟಲ ನೀಡುತ್ತಿದ್ದ ಕಾರಣದಿಂದಾಗಿ ಈತನನ್ನು ಕಾಲಿಗೆ ಸೇರ್ಪಡೆ ಕಟ್ಟಿ ಕೂಡಿ ಹಾಕಲಾಗಿತ್ತು.

ಈ ಬಗ್ಗೆ ಮಾಹಿತಿಯನ್ನು ತಿಳಿದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಜಿಲ್ಲಾ ಮುಖ್ಯಸ್ಥರು ಹಾಗೂ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಾಧವ ನಾಯಕ ಅವರು ಈತನನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನಶಕ್ತಿ ವೇದಿಕೆ ನೇತೃತ್ವದಲ್ಲಿ ಪೊಲೀಸ್ ಇಲಾಖೆ,ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರದಲ್ಲಿ ರಕ್ಷಣೆ ಮಾಡಲಾಗಿದೆ. ತಾಲೂಕಾಡಳಿತ, ಪೊಲೀಸ್ ಇಲಾಖೆ, ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಆಲೂರಿಗೆ ಭೇಟಿ ನೀಡಿ, ಹೊಲದ ಮಧ್ಯದಲ್ಲಿರುವ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕೂಡಿ ಹಾಕಲಾಗಿದ್ದ ವಿನಾಯಕ ವಸಂತ ಸೋನಶೇಟ್ ಈತನನ್ನು ರಕ್ಷಣೆ ಮಾಡಿ, ಈತನ ಸಹೋದರನ ಜೊತೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಈತನ ಆರೋಗ್ಯ ತಪಾಸಣೆಯನ್ನು ಮಾಡಲಾಗಿದ್ದು, ಮುಂದೆ ಹೆಚ್ಚಿನ ಚಿಕಿತ್ಸೆಗೆ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ.

ಈ ಕಾರ್ಯದಲ್ಲಿ ಮಾಧವ ನಾಯ್ಕ ಅವರ ಜೊತೆ ರೆಡ್ ಕ್ರಾಸ್ ಸಂಸ್ಥೆಯ ರಾಮಾ ನಾಯ್ಕ,ಜನಶಕ್ತಿ ವೇದಿಕೆಯ ಬಾಬು ಶೇಟ್,ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಅನಿಲ್ ಕುಮಾರ್ ನಾಯ್ಕ,ಪಿಎಸ್ಐ ಅಮೀನ್ ಅತ್ತಾರ,ಆರೋಗ್ಯ ನಿರೀಕ್ಷಕ‌ ಗೋಪಿ ಚೌವ್ಹಾಣ್ ಮೊದಲಾದವರು ಭಾಗವಹಿಸಿದ್ದರು.

ಇದನ್ನೂ ಓದಿ:-ನಕಲಿ ಆ್ಯಪ್‌ಗಳಿಂದ ಎಚ್ಚರಿಕೆಯಿಂದಿರಿ..! ಕುಮಟಾ ಪೊಲೀಸರಿಂದ ಸಾರ್ವಜನಿಕರಿಗೆ ಎಚ್ಚರಿಕೆ