ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಂಡಕಂಡಲ್ಲಿಯೇ ಕೆಟ್ಟು ನಿಲ್ಲುತ್ತಿರುವ ಘಟನೆಗಳು ಪ್ರತಿದಿನವೂ ಕಾಣುವಂತಾಗಿದ್ದು, ಪ್ರಯಾಣಿಕರು ಸಂಚಾರಕ್ಕಾಗಿ ಪರದಾಡುವಂತಾಗಿದೆ.
ಕಂಡ ಕಂಡಲ್ಲಿ ಬಸ್ ಕೆಟ್ಟು ನಿಲ್ಲುತ್ತಿರುವ ಕಾರಣ ಪ್ರಯಾಣಿಸುವ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಬಸ್ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯಕಾಣುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರತಿಯೊಂದು ಬಸ್ ನಿಲ್ದಾಣದಿಂದ ಬಸ್ ಹೊರಟ ಬಳಿಕ, ಕೇವಲ ಐದು, ಹತ್ತು ಕಿಲೋಮೀಟರ್ ದೂರ ಹೋಗುವಷ್ಟರಲ್ಲಿ ಹೆದ್ದಾರಿಯ ಮಧ್ಯೆ ಬಸ್ ನಿಂತು ಹೋಗುತ್ತಿರುವುದು ವರದಿಯಾಗುತ್ತಿದೆ. ಕೆಲ ಬಸ್‌ಗಳಲ್ಲಿ ಇಂಜಿನ್ ದೋಷ, ಕೆಲವೊಂದರಲ್ಲಿ ಬ್ರೇಕ್ ವೈಫಲ್ಯ, ಇನ್ನೊಂದರಲ್ಲಿ ಟೈರ್ ಸ್ಫೋಟ – ಹೀಗೆ ತೊಂದರೆಗಳ ಪಟ್ಟಿ ಉದ್ದವಾಗುತ್ತಿದೆ.
ಚಾಲಕರು ಮತ್ತು ನಿರ್ವಾಹಕರು ಈ ಬಗ್ಗೆ ದುರಸ್ತಿ ವಿಭಾಗಕ್ಕೆ ಮಾಹಿತಿ ನೀಡಿದರೂ ಆ ಬಗ್ಗೆ ಕಾಳಜಿವಹಿಸಿರುವಂತೆ ಕಾಣುತ್ತಿಲ್ಲ ಬಸ್‌ಗಳನ್ನು ಸರಿಯಾಗಿ ಪರೀಕ್ಷಿಸದೆ ರಸ್ತೆ ಮೇಲೆ ಓಡಿಸುತ್ತಿರುವುದು ನಡುರಸ್ತೆಯಲ್ಲಿ ಕೆಟ್ಟು ಹೋಗಲು ಕಾರಣವಾಗತ್ತಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ವಿರುದ್ಧ ಸಾರ್ವಜನಿಕರು
ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯವಾಗಿ ಸರ್ಕಾರಿ ಕಚೇರಿ, ಆಸ್ಪತ್ರೆ ಹೋಗುವವರಿಗೆ ಈ ಸಂಸ್ಥೆಯಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಸರಿಯಾದ ಸಮಯಕ್ಕೆ ಬಸ್ ಬರುತ್ತದೆ ಎನ್ನುವ ಬಗ್ಗೆ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ.
ಪದೆ ಪದೆ ಬಸ್ ಹಾಳಾಗುತ್ತಿರುವ ಬಗ್ಗೆ ಚಾಲಕರು, ನಿರ್ವಾಹಕರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾರು ಈ ಬಗ್ಗೆ ಕಾಳಜಿ ತೋರಿಸುವಂತೆ ಸದ್ಯಕ್ಕಂತೂ ಕಾಣುತ್ತಿಲ್ಲ. ಜಿಲ್ಲೆಯ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸಮರ್ಪಕ ಪರಿಶೀಲನೆ, ತಪಾಸಣೆ ಮತ್ತು ಬಸ್‌ನಲ್ಲಿ ತಾಂತ್ರಿಕ ದೋಷಗಳ ಬಗ್ಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ನಿತ್ಯವೂ ಬಸ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣ ಕ್ರಮ ಕೈಗೊಳ್ಳದೆ ಇದ್ದರೆ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳದುಕೊಳ್ಳಬೇಕಾಗಿದೆ.