ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಕಾಯ್ಕಿಣಿ ರಸ್ತೆಯಲ್ಲಿರುವ ಮಾಡರ್ನ್ ಉಡುಪಿ ಹೋಟೇಲ್ ಬಳಿ ಇಂದು ಬೆಳಿಗ್ಗೆ ಭಾರೀ ದುರಂತವೊಂದು ತಪ್ಪಿದ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರದ ಬೃಹದಾಕಾರದ ರೆಂಬೆ ಬಿದ್ದು, ಬಾಲಕಿ ಗಾಯಗೊಂಡಿದ್ದಾಳೆ.

ಸುಭಾಷ್ ವೃತ್ತದ ದಿಕ್ಕಿಗೆ ತೆರಳುತ್ತಿದ್ದ ಸ್ಕೂಟಿ ಚಾಲನೆಯಲ್ಲಿರುವಾಗ, ರಸ್ತೆಯ ಬದಿಯಲ್ಲಿರುವ ಹಳೆಯ ಮರದ ರೆಂಬೆ ಹಠಾತ್ ಮುರಿದು ಬಿದ್ದು, ನೇರವಾಗಿ ಸ್ಕೂಟಿಯ ಮೇಲೆ ಬಿದ್ದಿದೆ. ಪರಿಣಾಮವಾಗಿ ಸ್ಕೂಟಿ ಅಡ್ಡವಾಗಿ ಬಿದ್ದು, ಬಾಲಕಿಯ ತಲೆಯ ಭಾಗಕ್ಕೆ ಪೆಟ್ಟಾಗಿದೆ. ಅಪಘಾತದ ನಂತರ ಸ್ಕೂಟಿ ಸವಾರ ತಕ್ಷಣವೇ ಬಾಲಕಿಯನ್ನು ಇನ್ನೊಂದು ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರವಾರ ಸಂಚಾರಿ ಪೊಲೀಸ್‌ರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಸಂಚಾರ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಸಿದ್ದಾರೆ.ಕಾರವಾರ ನಗರಸಭೆಯ ಸಿಬ್ಬಂದಿಗಳು ಮರದ ರೆಂಬೆ ತೆರವುಗೊಳಿಸಿದ್ದಾರೆ.

ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯಾದ್ದರಿಂದ,ಈ ರೀತಿಯ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ. ಮಳೆಯ ಹಿನ್ನಲೆಯಲ್ಲಿ ಬಿದ್ದಿರುವ ಹಳೆಯ ಮರಗಳು, ಕೊಂಬೆಗಳು ಹಾಗೂ ರೆಂಬೆಗಳು ಯಾವುದೇ ಕ್ಷಣದಲ್ಲಾದರೂ ಬಿದ್ದು ಅಪಾಯ ಉಂಟುಮಾಡುವ ಸಾಧ್ಯತೆ ಇದ್ದು, ಸ್ಥಳೀಯ ಅಂಗಡಿಕಾರರು ಆತಂಕಕ್ಕೆ‌ ಒಳಗಾಗಿದ್ದಾರೆ.

ಅಪಾಯಕಾರಿಯಾಗಿ ಇರುವ ಇತರ ರೆಂಬೆಗಳನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ , ನಗರಸಭೆ ಮತ್ತು ಸಂಬಂಧಿತ ಇಲಾಖೆಗಳು ತ್ವರಿತ ಕ್ರಮ ಕೈಗೊಳ್ಳದೆ‌ ಹೋದರೆ ಮುಂದಿನ‌ ದಿನದಲ್ಲಿ ಭಾರೀ ಅನಾಹುತ ಉಂಟಾಗುವ ಬಗ್ಗೆ ಅಂಗಡಿಕಾರರು ಅತಂಕ ಹೊರ ಹಾಕಿದ್ದಾರೆ.

ಇದನ್ನೂ ಓದಿ; ಹಸುವಿನ ಮೇಲೂ ಕಾಮುಕರ ಕಣ್ಣು.! ಕಾಡಶೆಟ್ಟಿಹಳ್ಳಿಯಲ್ಲಿ ಕೃತ್ಯ