ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಪ್ರಾಕೃತಿಕ ಅಪಾಯಗಳು ಎದುರಾಗುತ್ತಿವೆ. ಭಾರೀ ಮಳೆಯ ಕಾರಣ ಕದ್ರಾದಿಂದ ಕೊಡಸಳ್ಳಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಭಾರೀ ಪ್ರಮಾಣದ ಗುಡ್ಡಕುಸಿತ ಸಂಭವಿಸಿದೆ.

ಕದ್ರಾ ಬಾಳೆಮನಿ ಹಾಗೂ ಸುಳಗೇರಿ ಮಾರ್ಗವಾಗಿ ಕೊಡಸಳ್ಳಿ ಡ್ಯಾಂನತ್ತ ಸಾಗುವ ರಸ್ತೆಯ ಮೇಲೆಯೇ ಗುಡ್ಡ ಕುಸಿದಿದ್ದು, ರಸ್ತೆಗೆ ಮಣ್ಣು ಮತ್ತು ಕಲ್ಲು ಬಿದ್ದು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಂಚಾರ ಬಂದ್ ಆಗಿರುವುದರಿಂದ ಕೊಡಸಳ್ಳಿ ಡ್ಯಾಂ ಸಿಬ್ಬಂದಿಗೆ ಡ್ಯೂಟಿ ಶಿಫ್ಟಿಂಗ್ ಹಾಗೂ ಸಂಪರ್ಕ ಕಾಯ್ದುಕೊಳ್ಳುವಲ್ಲಿ ತೀವ್ರ ತೊಂದರೆ ಉಂಟಾಗಿದೆ.

ಅರಣ್ಯ ಪ್ರದೇಶವಾಗಿರುವುದರಿಂದ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ನಿರಂತರ ಭಾರೀ ಮಳೆಯಿಂದಾಗಿ ಮಣ್ಣು ತೆಗೆಯುವ ಕಾರ್ಯಕ್ಕೂ ವಿಳಂಬ ಉಂಟಾಗುತ್ತಿದೆ. ಇದೀಗ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಆರಂಭವಾಗಿದೆ.

ಇದನ್ನೂ ಓದಿ:-ಕೇಣಿ ಬಂದರು ಯೋಜನೆ :ಮೀನುಗಾರರ ಮನೆ/  ಕಡಲತೀರ ಸ್ವಾಧೀನವಿಲ್ಲ,‌ ಸಾಧಕ-ಬಾಧಕ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ JSW