ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ ಎನ್ಡಬ್ಲೂಕೆಎಸ್ಆರ್ಟಿಸಿಯ ಪರಸ್ಥಿತಿಯನ್ನು ಕುಲಂಕಷವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನ ಸೆಳೆಯುವಲ್ಲಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಶ್ರೀನಾಥ್ ಜೋಶಿ ಸಿದ್ದರ ಅವರು ಮುಂದಾಗಿದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಇರುವ ಸಚಿವರ ಕಚೇರಿಗೆ ಬೇಟ್ಟಿ ನೀಡಿದ ಶ್ರೀನಾಥ್ ಜೋಶಿ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಂಸ್ಥೆಯಲ್ಲಿ ಇರುವ ಎಲ್ಲಾ ಸಮಸ್ಯೆಯನ್ನು ವಿವರಿಸಿದ್ದಾರೆ. ಆ ಪೈಕಿ ಮುಖ್ಯವಾಗಿ ಕಾರವಾರ ಬಸ್ ನಿಲ್ದಾಣ ಮತ್ತು ಡಿಪೋ ಸಮಸ್ಯೆ, ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿ ಸೇರಿದಂತೆ, ಮುಖ್ಯವಾಗಿ ಜಿಲ್ಲಾ ಕೇಂದ್ರದಿಂದ ರಾಜಧಾನಿ ಬೆಂಗಳೂರು,ಮುಂಬೈ, ಪುಣೆ ಇತ್ಯಾದಿ ದೂರದ ಊರುಗಳಿಗೆ ತೆರಳುವ ಬಸ್ಗಳನ್ನು ನಿಲ್ಲಿಸಿರುವ ಮಾಹಿತಿ, ಖಾಸಗಿ ಬಸ್ನವರಿಗೆ ಅನುಕೂಲವಾಗುವಂತೆ ವರ್ತಿಸುವ ಸಿಬ್ಬಂದಿಗಳ ವರ್ತನೆ ಇತ್ಯಾದಿಗಳ ಬಗ್ಗೆ ಸಚಿವರಿಗೆ ದೂರು ನೀಡಲಾಗಿದೆ.
ಜಿಲ್ಲಾ ಕೇಂದ್ರ ಕಾರವಾರದಿಂದ ರಾಜಧಾನಿ ಬೆಂಗಳೂರಿಗೆ ಎನ್ಡಬ್ಲೂಕೆಎಸ್ಆರ್ಟಿಸಿಯ ಒಂದು ಸಾಮಾನ್ಯ ಸಾರಿಗೆ ಬಸ್ ಹೊರತು ಪಡಿಸಿದರೆ ಬೇರೆ ಯಾವುದೇ ಬಸ್ನ ಸೇವೆಗಳು ಇರುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ, ಕಾರವಾರದ ಶಾಸಕರ ಗಮನಕ್ಕೂ ತಂದರೂ ಯಾವುದೇ ಲಾಭವಾಗದ ಹಿನ್ನೆಲೆಯಲ್ಲಿ ಸ್ವತಃ ಸಾರಿಗೆ ಸಚಿವರನ್ನು ಕಂಡು ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಂಸ್ಥೆಯ ಅವಾಂತರಗಳ ಕುರಿತ ಗಮನ ಸೆಳೆಯಲಾಗಿದೆ.
ಕಾರವಾರ ದಿಂದ ನಿತ್ಯವೂ 15ಕ್ಕೂ ಹೆಚ್ಚು ಖಾಸಗಿ ಬಸ್ಗಳು ಬೆಂಗಳೂರಿಗೆ ಸಂಚರಿಸುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಉತ್ತರ ಕನ್ನಡ ಜಿಲ್ಲೆಯ ಉದ್ಯೋಗದಲ್ಲಿ ಇರುವ ಜನರ ಪೈಕಿ ಶೇ.34 ರಷ್ಟು ಜನರು ಬೆಂಗಳೂರಿನಲ್ಲಿ ಇದ್ದಾರೆ.
ಮಹಾರಾಷ್ಟ್ರದಲ್ಲಿ ಶೇ.21 ರಷ್ಟು ಜನರಿದ್ದರೆ, ಶೇ.35 ರಷ್ಟು ಜನರು ಗೋವಾದಲ್ಲಿದ್ದಾರೆ. ಮಿಕ್ಕವರು ಇತರೇ ಕಡೆಗಳಲ್ಲಿ ಇರುತ್ತಾರೆ ಎನ್ನುವ ಲೆಕ್ಕಾಚಾರವೊಂದಿದೆ. ಇನ್ನು ಕಾರವಾರದವರನ್ನೇ ನೋಡಿದಾಗ ಶೇ.26 ರಷ್ಟು ಉದ್ಯೋಗಿಗಳು ಬೆಂಗಳೂರು, ಶೇ.39 ರಷ್ಟು ಗೋವಾ, ಶೇ.27 ರಷ್ಟು ಮಹಾರಾಷ್ಟ್ರ ಶೇ.13 ರಷ್ಟು ಜನ ವಿದೇಶದಲ್ಲಿ ಹಾಗೂ ಶೇ.8 ರಷ್ಟು ಜನ ವಿವಿಧ ಮರ್ಚಂಟ್ ಶಿಪ್ನಲ್ಲಿ ಕೆಲಸ ಮಾಡುತ್ತಾರೆ ಎನ್ನುವುದನ್ನು ಸಚಿವರ ಗಮನಕ್ಕೆ ತರಲಾಯಿತು.
ಆದರೆ ಕಾರವಾರದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಹೊರತು ಪಡಿಸಿದರೆ ರೈಲೇಗತಿ ಎನ್ನುವ ಸ್ಥಿತಿಯನ್ನು ಸೃಷ್ಟಿಮಾಡಲಾಗಿದೆ.
ಕಳೆದ ಕೆಲವು ತಿಂಗಳುಗಳವರೆಗೆ ಕಾರವಾರ ದಿಂದ ಬೆಂಗಳೂರಿಗೆ 2 ಸಾಮಾನ್ಯ ಸಾರಿಗೆ ಬಸ್, ತಲಾ ಒಂದು ರಾಜಹಂಸ ಹಾಗೂ ಸ್ಲಿಪರ್ ಬಸ್ಗಳು ಜನರ ಸೇವೆಗೆ ನಿತ್ಯವೂ ಇರುತ್ತಿದ್ದವು. ಆದರೆ ಕಳೆದ ಕೆಲವು ತಿಂಗಳಿಂದ ಒಂದು ಸಾಮಾನ್ಯ ಸಾರಿಗೆ ಬಸ್ ಬಿಟ್ಟರೆ ಕಾರವಾರ ಘಟಕದಿಂದ ಬೆಂಗಳೂರಿಗೆ ಯಾವುದೇ ಬಸ್ ಸಂಚರಿಸುವುದಿಲ್ಲ. ಈ ಭಾಗದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನೇ ಅವಲಂಬಿಸಬೇಕಾಗಿದೆ.
ಕಾರವಾರದಿಂದ ಬೆಂಗಳೂರಿಗೆ ಇದ್ದ ಸ್ಲಿಪರ್ ಬಸ್ಸು ಗೋಕರ್ಣ ಮಾರ್ಗವಾಗಿ ಕುಮಟಾ, ಹೊನ್ನಾವರ ಸಾಗರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಅದೇ ಮಾರ್ಗವಾಗಿ ವಾಪಸ್ ಬರುತ್ತಿತ್ತು. ಇನ್ನೂ ರಾಜಹಂಸ ಬಸ್ ಕಾರವಾರ ದಿಂದ ಅಂಕೋಲಾ ಶಿರಸಿ, ಹಾವೇರಿ ದಾವಣಗೆರೆ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಅದೇ ಮಾರ್ಗದಿಂದ ವಾಪಸ್ ಬರುತ್ತಿತ್ತು. ಹಾಗೆಯೆ ಸಾಮಾನ್ಯ ಬಸ್ಗಳಲ್ಲಿ ಒಂದು ಕಾರವಾರ ದಿಂದ ಹೊರಟು ಕುಮಟಾ, ಸಿದ್ದಾಪೂರ, ಸಾಗರ ಶಿವಮೊಗ್ಗ ಮಾರ್ಗದಿಂದ ಬೆಂಗಳೂರಿಗೆ ತೆರಳಿದರೆ, ಇನ್ನೊಂದು ಬಸ್ ಕುಮಟಾ ಹೊನ್ನಾವರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಭಾಗದ ಎಲ್ಲಾ ಪ್ರಯಾಣಿಕರು ಈ ಬಸ್ನ ಲಾಭವನ್ನು ಪಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಶ್ರೀನಾಥ್ ಜೋಶಿ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.
ಗೋವಾ ದಿಂದ ಬೆಂಗಳೂರಿಗೆ ವಾರಾಂತ್ಯಕ್ಕೆ ತೆರಳುವ ಮೈಸೂರು ವಿಭಾಗದ ಬಸ್ ಸಂಜೆ ೭ಕ್ಕೆ ಅಂಕೋಲಾದ ಖಾಸಗಿ ಹೋಟೇಲನಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಪ್ರಯಾಣಿಕರಿಗೆ ಅತ್ತ ಊಟವೂ ಆಗುವುದಿಲ್ಲ ಇತ್ತ ತಿಂಡಿಯೂ ಆಗುವುದಿಲ್ಲ. ಇದರಿಂದ ನಿತ್ಯವೂ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿಗಳ ಮದ್ಯ ತಿಕ್ಕಾಟ ಉಂಟಾಗುತ್ತಿದೆ. ಶಿರಸಿ ಬಸ್ ನಿಲ್ದಾಣದಲ್ಲಿ ಇರುವ ಕ್ಯಾಂಟಿನ್ ಅವೈಜ್ಞಾನಿಕ ಮತ್ತು ಅಸಭ್ಯವಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಗುಂಡಾಗಿರಿ ಪ್ರದರ್ಶನ ಮಾಡುತ್ತಿದ್ದಾರೆ. ಆ ಕುರಿತು ದೂರು ದಾಖಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಮಾಹಿತಿಯನ್ನು ಹಿರಿಯ ಪತ್ರಕರ್ತ ಶ್ರೀನಾಥ್ ಜೋಶಿ ಅವರು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದಾಖಲೆ ಸಹಿತ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವರು ವಾಸ್ತವದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕೈಗಾ ಅಣುಸ್ಥಾವರ, ಏಷಿಯಾದ ಅತೀ ದೊಡ್ಡ ಸೀಬರ್ಡ್ ನೌಕಾನೆಲೆ ಯೋಜನೆ, ಗೋವಾರಾಜ್ಯಕ್ಕೆ ತಗುಲಿಕೊಂಡ ಪ್ರವಾಸೋದ್ಯಮ ಸೇರಿದಂತೆ ಇನ್ನೂ ಅನೇಕ ವಿಶೇಷತೆಗಳಿಗೆ ಕಾರಣವಾದ ಕಾರವಾರದಿಂದ ರಾಜಧಾನಿಗೆ ಸರಕಾರಿ ಬಸ್ ಓಡಿಸದೇ ಇರುವುದು ವಿಷಾಧನಿಯ. ಈ ಕುರಿತು ತಕ್ಷಣ ಅಧಿಕಾರಿಗಳಿಂದ ವರದಿ ತರಿಸಿ ಪ್ರಯಾಣಿಕರಿಗೆ ಅನುಕೂಲವಾಗುಂತೆ ವ್ಯವಸ್ಥ ಮಾಡಲಾಗುವುದು.
ಒಂದು ವೇಳೆ ಕಾರವಾರ ಘಟಕದಲ್ಲಿ ಬಸ್ಗಳ ಕೊರತೆ ಇದ್ದರೆ ಸದ್ಯದಲ್ಲಿಯೇ ನೂತನ ಬಸ್ಗಳನ್ನು ಅಲ್ಲಿಗೆ ನೀಡಲಾಗುವುದು. ಯಾವ ಕಾರಣಕ್ಕೆ ಸಂಸ್ಥೆಯ ಬಸ್ಗಳನ್ನು ನಿಲ್ಲಿಸಲಾಗಿದೆ. ಅದೇ ಜಾಗದಲ್ಲಿ ಖಾಸಗಿ ಬಸ್ಗಳು ಎಷ್ಟು ಓಡಾಡುತ್ತಿವೆ.? ರೈಲಿನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದಾರೆ ಎನ್ನುವ ಎಲ್ಲಾ ಮಾಹಿತಿಯನ್ನು ಪಡೆದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯ ಜೊತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿದೆ ಎನ್ನಲಾದ ಎಲ್ಲಾ ಅವ್ಯವಹಾರಗಳ ಕುರಿತು ಸೂಕ್ತ ತನಿಖೆಯ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಶ್ರೀನಾಥ್ ಜೋಶಿ ಸಿದ್ದರ ತಿಳಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು ನಿವಾಸಿ ಶಿರಸಿ–ಸಿದ್ದಾಪುರ ಜನರಿಗಾಗಿ ಸದಾ ನಾನು ಇರುತ್ತೇನೆ: ಶಾಸಕ ಭೀಮಣ್ಣ ಟಿ. ನಾಯ್ಕ ಭರವಸೆ