ಸುದ್ದಿ ಬಿಂದು ಬ್ಯೂರೋ ವರದಿ
ಕಾರವಾರ: ತಾಲೂಕಿನ ಕದ್ರಾ ಗ್ರಾಮದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಚಿರಾಗ್ ಎಂಬಾತನನ್ನ ಕಾರವಾರ ಪೊಲೀಸರು ಚೆನೈನಲ್ಲಿ ಬಂಧಿಸಿ ಕಾರವಾರ ಕರೆತಂದಿದ್ದಾರೆ.
ಜನವರಿ 9ರಂದು ಕಾರವಾರ ಗ್ರಾಮದಲ್ಲಿ ರಿಶೇಲ್ ಡಿಸೋಜಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ರಿಶೇಲ್ ಆತ್ಮಹತ್ಯೆಗೆ ಚಿರಾಗ್ನ ಕಿರುಕುಳವೇ ಕಾರಣ ಎಂದು ಆರೋಪಿಸಿ, ಯುವತಿಯ ಪಾಲಕರು ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕಾರವಾರ ಪೊಲೀಸರು ತನಿಖೆ ಕೈಗೊಂಡಿದ್ದು, ಚಿರಾಗ್ ಚೆನೈನಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ತಂಗಿದ್ದಾನೆ ಎಂಬ ಮಾಹಿತಿ ಪಡೆದಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಚೆನೈಗೆ ತೆರಳಿ ಚಿರಾಗ್ ಅನ್ನು ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ.
ಚಿರಾಗ್ ಹಾಗೂ ರಿಶೇಲ್ ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ, ಇತ್ತೀಚಿನ ದಿನಗಳಲ್ಲಿ ಉಂಟಾದ ಮನಸ್ತಾಪ ಮತ್ತು ಕಿರುಕುಳದಿಂದ ಮನನೊಂದ ರಿಶೇಲ್ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಯುವತಿಯ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಹಿನ್ನೆಲೆ ಇರುವುದರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಆರೋಪಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಹೆಚ್ಚಾಗಿದೆ.
ಇದನ್ನೂ ಓದಿ/ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ: ಹುಟ್ಟುಹಬ್ಬ–ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯ ರಜೆ


