ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾಸೂರು ಗ್ರಾಮದಲ್ಲಿ ಪುಡಿ ರೌಡಿಯೊಬ್ಬ ನಡು ರಸ್ತೆಯಲ್ಲೇ ರಂಪಾಟ ನಡೆಸಿ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಮಹೇಶ್ ಹೊನ್ನಪ್ಪ ಪಟಗಾರ ಎಂಬಾತ ಮದ್ಯದ ಅಮಲಿನಲ್ಲಿ ಪ್ರತಿದಿನವೂ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರೊಂದಿಗೆ ಜಗಳವಾಡುತ್ತಾ ರಂಪಾಟ ನಡೆಸುತ್ತಿದ್ದ ಎನ್ನಲಾಗಿದೆ. ಇದೇ ವೇಳೆ ಮಾಸೂರು ಗ್ರಾಮದ ಬಾಲಚಂದ್ರ ಕುಪ್ಪಯ್ಯ ಪಟಗಾರ ಎಂಬ ವ್ಯಕ್ತಿಗೆ ರಸ್ತೆಯಲ್ಲೇ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಬಗ್ಗೆ ಬಾಲಚಂದ್ರ ಪ್ರಶ್ನೆ ಮಾಡಿದಾಗ, ಕೋಪಗೊಂಡ ಮಹೇಶ್ ಹೊನ್ನಪ್ಪ ಪಟಗಾರ ದೊಣ್ಣೆಯಿಂದ ಬಾಲಚಂದ್ರನ ತಲೆ ಹಾಗೂ ಮುಖಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ದೃಶ್ಯವನ್ನು ಸ್ಥಳದಲ್ಲಿದ್ದ ಗ್ರಾಮಸ್ಥರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಚಂದ್ರನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿದ ಮಹೇಶ್ ಹೊನ್ನಪ್ಪ ಪಟಗಾರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ/ಯೋಗದಲ್ಲಿ ಇತಿಹಾಸ ಬರೆದ ಕೊಡ್ಕಣಿಯ ಚಿನ್ನದ ಹುಡುಗಿ ಮಾನ್ವಿ ನಾಯ್ಕ




