ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ನರೇಗಾ ಯೋಜನೆಗೆ ಕೇಂದ್ರ ಸರಕಾರ ತಿದ್ದುಪಡಿ ಮಾಡಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಟ್ಕಳದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು ನರೇಗಾ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿರುವ ದೇಶದ 12 ಕೋಟಿ ಕಾರ್ಮಿಕರು ಹಾಗೂ 6 ಕೋಟಿ ಮಹಿಳೆಯರ ಜೀವನಕ್ಕೆ ಕೇಂದ್ರ ಸರಕಾರ ಬೆಂಕಿ ಇಟ್ಟಂತಾಗಿದೆ ಎಂದು ಕಿಡಿಕಾರಿದರು. ವಿಬಿ ರಾಮ್ ಜಿ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರ, ನರೇಗಾ ಕೂಲಿಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಇದು ಬಡವರ ವಿರೋಧಿ ಕಾಯ್ದೆಯಾಗಿದ್ದು, ಗ್ರಾಮೀಣ ಭಾರತದ ಬದುಕನ್ನೇ ನಾಶ ಮಾಡುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ರಾಜ್ಯದಾದ್ಯಂತ ಬೃಹತ್ ಹೋರಾಟ ಸಂಘಟಿಸಲಾಗುವುದು. ತಿದ್ದುಪಡಿ ಮಾಡಿದ ನರೇಗಾ ಯೋಜನೆಯಿಂದ ಜನರಿಗೆ ಆಗುವ ಅನ್ಯಾಯ, ಸಮಸ್ಯೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವ ವೈದ್ಯ ತಿಳಿಸಿದರು. ನರೇಗಾ ಯೋಜನೆಯ ಮೂಲ ಉದ್ದೇಶವನ್ನೇ ಹಾಳು ಮಾಡುವ ಈ ತಿದ್ದುಪಡಿಯನ್ನು ಕೇಂದ್ರ ಸರಕಾರ ತಕ್ಷಣ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರಕಾರದ ಈ ನಡೆಯ ವಿರುದ್ಧ ತೀವ್ರ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಲಿದೆ ಎಂದರು.




