ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ರಂಜಿತಾ ಹತ್ಯೆ–ರಫೀಕ್ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಬೆಳಕಿಗೆ ಬಂದಿದೆ. ರಂಜಿತಾ ಬನ್ಸೋಡೆ ಹತ್ಯೆ ಹಾಗೂ ರಫೀಕ್ ಆತ್ಮಹತ್ಯೆ ಪ್ರಕರಣ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ರಂಜಿತಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಫೀಕ್,ಆಕೆಯ ಕುಟುಂಬಸ್ಥರೊಂದಿಗೂ ಆತ್ಮೀಯ ಸಂಪರ್ಕ ಹೊಂದಿದ್ದ ಎನ್ನಲಾಗಿದೆ..
ಇದಕ್ಕೆ ಸಾಕ್ಷಿ ಎಂಬಂತೆ, ರಫೀಕ್ ಹಾಗೂ ರಂಜಿತಾ ಸಹೋದರ ವೀರಭದ್ರ ಬನ್ಸೋಡೆ ಒಟ್ಟಿಗೆ ಪಾರ್ಟಿಯಲ್ಲಿ ಭಾಗವಹಿಸಿರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ., ರಫೀಕ್ ಮತ್ತು ರಂಜಿತಾ ಬಾಲ್ಯದಿಂದಲೇ ಪರಿಚಯ ಹೊಂದಿದ್ದವರು. ಈ ಕಾರಣದಿಂದ ಕುಟುಂಬದವರು ರಫೀಕ್ ಮೇಲೆ ನಂಬಿಕೆ ಇಟ್ಟಿದ್ದರು ಎನ್ನಲಾಗಿದೆ. ಸಂಘದ ಸಾಲ ವಸೂಲಾತಿ ಸಂಬಂಧವಾಗಿ ರಫೀಕ್ ಆಗಾಗ ರಂಜಿತಾ ಅವರ ಮನೆಗೆ ಬರುತ್ತಿದ್ದ. ಈ ಸಂದರ್ಭದಲ್ಲೇ ರಂಜಿತಾ ಅವರು ವಿವಾಹ ವಿಚ್ಛೇದಿತರಾಗಿರುವ ವಿಚಾರ ತಿಳಿದ ರಫೀಕ್, ಕುಟುಂಬದೊಂದಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಸಾಲ ವಸೂಲಾತಿ ನೆಪದಲ್ಲಿ ರಂಜಿತಾ ಅವರ ಮೊಬೈಲ್ ಸಂಖ್ಯೆ ಪಡೆದ ರಫೀಕ್, ನಂತರ ಪದೇಪದೇ ಕರೆ ಮಾಡಿ ಸಂಪರ್ಕದಲ್ಲಿರಲು ಆರಂಭಿಸಿದ್ದಾನೆ. ಇದೇ ಅವಧಿಯಲ್ಲಿ ರಂಜಿತಾ ಅವರ ಸಹೋದರ ವೀರಭದ್ರ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು, ಅನೇಕ ಬಾರಿ ಒಟ್ಟಿಗೆ ಊಟ ಮತ್ತು ಸ್ನೇಹ ಕೂಟಗಳಲ್ಲಿ ಭಾಗವಹಿಸಿದ್ದಾನೆ.
ರಫೀಕ್ ಹಲವು ಬಾರಿ ರಂಜಿತಾ ಅವರ ಮನೆಗೆ ಭೇಟಿ ನೀಡಿ, ಕುಟುಂಬದೊಂದಿಗೆ ಊಟ ಮಾಡುತ್ತಿದ್ದ ಎನ್ನಲಾಗಿದೆ.. ಕಾಳಮ್ಮನಗರದ ಆಶ್ರಯ ಕಾಲೋನಿ ಸುತ್ತಮುತ್ತ ಅವನ ಓಡಾಟ ಸಾಮಾನ್ಯವಾಗಿದ್ದರಿಂದ, ಸ್ಥಳೀಯರಿಗೆ ಯಾವುದೇ ಅನುಮಾನ ಉಂಟಾಗಿರಲಿಲ್ಲ.
ಆದರೆ ಕಳೆದ ದೀಪಾವಳಿ ಹಬ್ಬದ ನಂತರ ರಫೀಕ್, ರಂಜಿತಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಈ ವರ್ತನೆಗೆ ರಂಜಿತಾ ಅವರ ಸಹೋದರಿ ಅಕ್ಷತಾ ತೀವ್ರ ವಿರೋಧ ವ್ಯಕ್ತಪಡಿಸಿ, ರಫೀಕ್‌ಗೆ ಎಚ್ಚರಿಕೆ ನೀಡಿದ್ದರು. ಇದಾದರೂ ರಫೀಕ್ ಬೇರೆ ಬೇರೆ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡುತ್ತಿದ್ದನೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಂಜಿತಾ ಅವರ ಸಹೋದರ ವೀರಭದ್ರ ಕೂಡ ರಫೀಕ್‌ಗೆ ಬುದ್ದಿವಾದ ಹೇಳಿದ್ದರು.
ಇದೇ ವಿಚಾರದಿಂದ ಅಸಮಾಧಾನಗೊಂಡ ರಫೀಕ್, ರಂಜಿತಾ ಅವರ ಮುಂದೆ ಮದುವೆಯ ಪ್ರಸ್ತಾಪ ಇಟ್ಟಿದ್ದ. ಅದನ್ನು ರಂಜಿತಾ ತಿರಸ್ಕರಿಸಿದ್ದರಿಂದ ಶನಿವಾರ ಕಾಳಮ್ಮನಗರದ ಅಂಗಡಿಯ ಸಮೀಪ ಎರಡು ಗಂಟೆಗಳ ಕಾಲ ಕಾಯುತ್ತಿದ್ದ ರಫೀಕ್, ರಂಜಿತಾ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ .
ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.


