ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಕಳೆದ ಏಳು ವರ್ಷಗಳಿಂದ ನಡೆಯದೆ ಇದ್ದ ಕರಾವಳಿ ಉತ್ಸವವನ್ನು ಈ ಬಾರಿ ಭಾರೀ ಅದ್ಧೂರಿಯಾಗಿ ನಡೆಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಅವರು ಜಿಲ್ಲೆಯ ಜನರಷ್ಟೇ ಅಲ್ಲದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಈ ಹಿಂದೆ ನಡೆದ ಎಲ್ಲಾ ಕರಾವಳಿ ಉತ್ಸವಗಳು ಕೇವಲ ಮೂರು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಇತಿಹಾಸದಲ್ಲೇ ಸಚಿವ ಮಂಕಾಳ್ ವೈದ್ಯ ಹಾಗೂ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಕಾರವಾರದ ಕಡಲತೀರದಲ್ಲಿ ನಡೆದ ಕರಾವಳಿ ಉತ್ಸವ ಪ್ರೇಕ್ಷಕರಿಗೆ ಮೈಸೂರು ದಸರಾ ಅನುಭವ ನೀಡಿದೆ. ಕರಾವಳಿ ಉತ್ಸವದ ವೇದಿಕೆಯಲ್ಲಿ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ನ ಖ್ಯಾತ ಗಾಯಕರು ಪ್ರತಿದಿನವೂ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.
ಕರಾವಳಿ ಉತ್ಸವದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನಾಂದಿ
ಹಿಂದೆಲ್ಲಾ ಕರಾವಳಿ ಉತ್ಸವಗಳು ನಡೆದಾಗ ಅವು ಕೇವಲ ಉತ್ಸವಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಆದರೆ ಈ ವರ್ಷ ನಡೆದ ಕರಾವಳಿ ಉತ್ಸವ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಉತ್ಸವಕ್ಕೆ ಬರಲೇಬೇಕೆಂದು ಸಚಿವ ಮಂಕಾಳ್ ವೈದ್ಯ ಅವರು ಹೇಳಿದಾಗ, ಶಾಸಕ ಸತೀಶ್ ಸೈಲ್ ಕೂಡ ಒತ್ತಾಯಿಸಿದ್ದರು. ಈ ಇಬ್ಬರ ಕರೆಗೆ ಓಗೊಟ್ಟು ಕಾರವಾರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಲವು ರಸ್ತೆ, ಸೇತುವೆಗಳು ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಭರವಸೆ ನೀಡಿದರು. ಅಲ್ಲದೆ ಗಂಗಾವಳಿ ಸೇತುವೆ ಉದ್ಘಾಟನೆ ಸೇರಿದಂತೆ ಇನ್ನೂ ಅನೇಕ ಕಾಮಗಾರಿಗಳ ಉದ್ಘಾಟನೆಗಾಗಿ ಶೀಘ್ರದಲ್ಲೇ ಮತ್ತೆ ಜಿಲ್ಲೆಗೆ ಆಗಮಿಸುವುದಾಗಿ ಸಚಿವ ಮಂಕಾಳ್ ವೈದ್ಯ ಅವರಿಗೆ ಉಪಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಒಂದೇ ಕಾರಿನಲ್ಲಿ ತೆರಳಿದ ಡಿಕೆ ಹಾಗೂ ವೈದ್ಯ
ಕರಾವಳಿ ಉತ್ಸವ ಕಾರ್ಯಕ್ರಮ ಮುಗಿದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಇಬ್ಬರೂ ಒಂದೇ ಕಾರಿನಲ್ಲಿ ಗೋವಾಕ್ಕೆ ತೆರಳಿದರು. ಈ ವೇಳೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಿರುವ ಹತ್ತಾರು ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಗಿದ್ದು, ಯಾವುದೇ ವಿಷಯಕ್ಕೂ ಚಿಂತಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು ಎನ್ನಲಾಗಿದೆ. ಜೊತೆಗೆ, ಏಳು ವರ್ಷಗಳಿಂದ ನಡೆಯದೆ ಇದ್ದ ಕರಾವಳಿ ಉತ್ಸವವನ್ನು ಏಳು ದಿನಗಳ ಕಾಲ ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.


