ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ತಾಲೂಕಿನ ಬಿಳಗಿ ಪಂಚಾಯತ್ ಹಾಗೂ ಕ್ಯಾದಗಿ ಅರಣ್ಯ ವಲಯಕ್ಕೆ ಒಳಪಡುವ  ಗೋಳಿಕೈ ಗ್ರಾಮದ ಜಯರಾಮ ಹೆಗಡೆ ಎಂಬುವವರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ಅತಿಕ್ರಮಣ ಜಾಗದ ಸುಮಾರು 120 ಕ್ಕೂ ಹೆಚ್ಚು ಅಡಿಕೆ ಮರವನ್ನು ಅರಣ್ಯ ಇಲಾಖೆಯವರು ಕಡಿದ ಸ್ಥಳಕ್ಕೆ ಬಿಜೆಪಿ ಮುಖಂಡ ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ  ಭೇಟಿ ನೀಡಿ ಘಟನೆ ಖಂಡಿಸಿ ರೈತರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ  ಅನಂತಮೂರ್ತಿ ಹೆಗಡೆ,‌ ಅರಣ್ಯ ಉಳಿಸುವವರೇ ಈ ರೀತಿಯ ದೌರ್ಜನ್ಯ ನಡೆಸಿದರೆ ರೈತರು ಎಲ್ಲಿಗೆ ಹೋಗಬೇಕು ?  ಅರಣ್ಯ ಇಲಾಖೆಯವರಿಗೆ ಮರಗಳನ್ನು ಕಡಿಯುವ ಅಧಿಕಾರವನ್ನು ನೀಡಿದವರಾರು ?  ರೈತರ ದಿನಾಚರಣೆಯ ದಿನವೇ ಈ ರೀತಿಯ ಕೃತ್ಯ ಮಾಡಿರುವುದು ಎಷ್ಟು ಸರಿ ? ಈ ದುರುದ್ದೇಶದ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿದುಬರುತ್ತಿಲ್ಲ. ನಮ್ಮ ಜಿಲ್ಲೆಯ ರೈತರು ಶಾಂತ ಸ್ವಭಾವದವರೆಂದು ಕಡೆಗಣಿಸಬೇಡಿ, ರೈತರನ್ನು ಒಕ್ಕಲೆಬ್ಬಿಸಿದ್ದರೆ ಉಗ್ರ ಹೋರಾಟಕ್ಕೂ ನಮ್ಮ ರೈತರು ಹಿಂಜರಿಯುವುದಿಲ್ಲ  ಎಂದು ಎಚ್ಚರಿಸಿದ್ದಾರೆ.

ಮರ ಕಡಿದಿರುವ ಪ್ರಕ್ರಿಯೆಯಲ್ಲಿ ತೊಡಗಿದ  ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. 1980 ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ತೋಟ ಇಂದು ನಾಶವಾಗಿದೆ. ಅಲ್ಲಲ್ಲಿ  ಬೇರೆ  ಬೇರೆ ಜಾತಿಯ ಮರಗಳನ್ನು ಬಿಟ್ಟು ಅಡಿಕೆ ಮರಗಳನ್ನು ಸಂಪೂರ್ಣ ಕಿತ್ತೆಸೆಯಲಾಗಿದೆ   ರೈತರಿಗೆ ಮಾಡಿದ ಅನ್ಯಾಯ ಎಂದರು. ಸ್ಥಳೀಯ ಶಾಸಕರು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಬೇಕು ಎಂದು ಆಗ್ರಹ ಮಾಡಿದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ ತಿಮ್ಮಪ್ಪ
ಕ್ಯಾದಗಿ, ಬಿಜೆಪಿ ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ , ಬಿಜೆಪಿ ಮಂಡಲ ಪ್ರದಾನಕಾರ್ಯದರ್ಶಿ ತೋಟಪ್ಪ ನಾಯ್ಕ, ಬಿಜೆಪಿ ಪ್ರಮುಖರಾದ ಕೃಷ್ಣಮೂರ್ತಿ ನಾಯ್ಕ ಐಸೂರು,ಆದರ್ಶ ಪೈಅಣ್ಣಪ್ಪ ನಾಯ್ಕ ಕಡಕೇರಿ,ವಿಜಯ ಹೆಗಡೆ,ರೈತಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ/ ಚಿತ್ರದುರ್ಗ ಸೀಬರ್ಡ್ ಬಸ್ ದುರಂತ: ಉತ್ತರ ಕನ್ನಡದ ರಶ್ಮಿ ಮಹಾಲೆ ದುರಂತ ಸಾವು