ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ: ಉತ್ತರಕನ್ನಡ ಜಿಲ್ಲೆಯ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣಗಳ ಖರೀದಿಗೆ ಟೆಂಡರ್ ಕರೆಯುವಂತೆ ಹಾಗೂ ತಜ್ಞ ವೈದ್ಯರ ನೇಮಕಾತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗುವುದು ಎಂದು ಸಿಎಂ ಪರ ಮನವಿ ಸ್ವೀಕರಿಸಿದ ರಾಜ್ಯ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಮಂಗಳವಾರ ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಚಳಿಗಾಲದ ಅಧಿವೇಶನದ ವೇಳೆ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಹೋರಾಟಗಾರರ ಬೇಡಿಕೆಗಳನ್ನು ಆಲಿಸಿ ಶೀಘ್ರದಲ್ಲಿ ಸಮಸ್ಯೆಗೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಹೋರಾಟಗಾರ ಅನಂತಮೂರ್ತಿ ಹೆಗಡೆ, ಕಳೆದ ಐದು ವರ್ಷಗಳಿಂದ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಶೇಕಡಾ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ವೈದ್ಯಕೀಯ ಉಪಕರಣಗಳ ಟೆಂಡರ್ ಹಾಗೂ ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿರುವ ಈ ಆಸ್ಪತ್ರೆಗೆ ತಕ್ಷಣವೇ ತಜ್ಞ ವೈದ್ಯರನ್ನು ನೇಮಿಸಿ ಕಾರ್ಯಾರಂಭಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯೆ ಉಷಾ ಹೆಗಡೆ ಮಾತನಾಡಿ, ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಜನರು ಚಿಕಿತ್ಸೆಗಾಗಿ ಹೊರ ಜಿಲ್ಲೆಗಳ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯ, ನರ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳ ಕೊರತೆ ತೀವ್ರವಾಗಿದೆ ಎಂದು ಹೇಳಿದರು.
ಇತರ ಹೋರಾಟಗಾರರು ಜಿಲ್ಲೆಯಲ್ಲಿ ನ್ಯೂರೋ ಸರ್ಜನ್ ಹಾಗೂ ಹಾರ್ಟ್ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳಿಲ್ಲದಿರುವುದು ಆತಂಕಕಾರಿ ಸಂಗತಿ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿ, ಸರ್ಕಾರ ತುರ್ತಾಗಿ ಆದೇಶ ಹೊರಡಿಸಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕಾರ್ಯಾರಂಭಗೊಳಿಸಬೇಕೆಂದು ಒತ್ತಾಯಿಸಿದರು.


