ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಿರುವ ಹಿನ್ನೆಲೆ, ಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಆಟೋ ಸಂಚರಿಸುವ ಪರ್ಮಿಟ್ ವ್ಯಾಪ್ತಿಯನ್ನು ನಗರ–ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿಲೋ ಮೀಟರ್‌ವರೆಗೆ ವಿಸ್ತರಿಸಬೇಕು ಎಂದು ಜಿಲ್ಲೆಯ ಆಟೋ ರಿಕ್ಷಾ ಚಾಲಕ–ಮಾಲಕರ ಸಂಘಟನೆಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಕಾರವಾದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್ ಗೌಡ ಶಿರಸಿ ಅವರು ಈ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಮನವಿ ಸಲ್ಲಿಸಿರುವ ಆಟೋ ವರ್ಗ, ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಗಳು ಮತ್ತು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಕೆಲವು ಬೇಡಿಕೆಗಳು ಈಡೇರಿದರೂ, ಅತಿ ಅವಶ್ಯಕವಾದ ಸಮಸ್ಯೆಗಳು ಇನ್ನೂ ಬಗೆಹರಿಯದೇ ಉಳಿದಿವೆ. ಜಾರಿಯಾದ ಬೇಡಿಕೆಗಳೂ ಎಲ್ಲ ಆಟೋ ವರ್ಗದವರಿಗೆ ಸಮರ್ಪಕವಾಗಿ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳಿದ್ದು, ರಾಜ್ಯಾದ್ಯಂತ ಅಂದಾಜು 8ಲಕ್ಷಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. ರಿಕ್ಷಾ ಖರೀದಿ, ರಸ್ತೆ ತೆರಿಗೆ, ಪರ್ಮಿಟ್, ವಿಮೆ, ನವೀಕರಣ, LPG–CNG–ಪೆಟ್ರೋಲ್,ಬಿಡಿ ಭಾಗಗಳ ತೆರಿಗೆಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಬರುತ್ತಿದೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಆಟೋಗಳ ಸಂಖ್ಯೆಯನ್ನು ಮೀರಿ ಹಲವು ತಾಲೂಕುಗಳಲ್ಲಿ ರಿಕ್ಷಾಗಳು ಹೆಚ್ಚಾಗಿರುವುದರಿಂದ, ಆಟೋ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ. ಜೊತೆಗೆ ಚಾಲಕ–ಮಾಲಕರಿಗೆ ಸಾಕಷ್ಟು ದುಡಿಮೆ ಇಲ್ಲದೆ ಜೀವನ ಸಂಕಷ್ಟದಲ್ಲಿದೆ. ಕೆಲವರು ಲಾಭದಾಸೆಯಿಂದ ಆಟೋ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎರಡು ಪರ್ಮಿಟ್‌ಗಿಂತ ಹೆಚ್ಚು ಹೊಂದಿರುವ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪರ್ಮಿಟ್ ತಾತ್ಕಾಲಿಕ ನಿಷೇಧ ಜಾರಿಯಲ್ಲಿರುವಂತೆ, ಉತ್ತರ ಕನ್ನಡದಲ್ಲೂ ಕನಿಷ್ಠ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು. ಪರ್ಮಿಟ್ ನೀಡುವಾಗ ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಪರವಾನಿಗೆಯನ್ನು ಕಡ್ಡಾಯಗೊಳಿಸಬೇಕು. ಹಳೆಯ ಜಿಲ್ಲಾ ಕೇಂದ್ರಗಳಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಪುನರುಜ್ಜೀವನಗೊಳಿಸಬೇಕು ಎಂದರು.

ಅಲ್ಲದೆ, ನಗರ ಪ್ರದೇಶಗಳಲ್ಲಿ 7 ಕಿ.ಮೀ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕಿ.ಮೀ ಮಾತ್ರ ಇರುವ ಸಂಚರಿಸುವ ಪರ್ಮಿಟ್ ವ್ಯಾಪ್ತಿಯಿಂದ ಆಟೋ ವರ್ಗಕ್ಕೆ ತೀವ್ರ ತೊಂದರೆ ಆಗುತ್ತಿದೆ. ಉದಾಹರಣೆಗೆ, ಪ್ರವಾಸಿ ತಾಣ ಮುರ್ಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ 300ಕ್ಕೂ ಹೆಚ್ಚು ಆಟೋಗಳಿದ್ದರೂ ಕೇವಲ 3 ಕಿ.ಮೀ ಸಂಚಾರ ಮಿತಿ ಇದೆ. ಪ್ರಾದೇಶಿಕ ಸಾರಿಗೆ ಕಚೇರಿ 27 ಕಿ.ಮೀ ದೂರದಲ್ಲಿದ್ದು, ಗ್ಯಾಸ್ ತುಂಬಿಸಲು ಭಟ್ಕಳ (15 ಕಿ.ಮೀ) ಅಥವಾ ಹೊನ್ನಾವರ (25 ಕಿ.ಮೀ) ತೆರಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವಘಡ ಸಂಭವಿಸಿದರೆ ಹೊಣೆಗಾರಿಕೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಆಟೋ ವರ್ಗ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಲ್ಲಿ ಜಾರಿಯಲ್ಲಿರುವಂತೆ ಉತ್ತರ ಕನ್ನಡದಲ್ಲೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ ವರೆಗೆ ಪರ್ಮಿಟ್ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಬೇರೆ ಜಿಲ್ಲೆಗಳ ನೊಂದಣಿ ಹೊಂದಿರುವ ಆಟೋ ರಿಕ್ಷಾಗಳಿಗೆ ಪರ್ಮಿಟ್ ಹಾಗೂ ಸಂಚಾರ ಪರವಾನಿಗೆ ನೀಡಬಾರದು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದು, ಇತರ ಜಿಲ್ಲೆಗಳಂತೆ ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿ, 30 ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ವಿನಂತಿಸಿದ್ದಾರೆ..