ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಹುಲೇಕಲ್‌ನ ಹೆಂಚಟರ್‌ನಲ್ಲಿ ಚೌಡೇಶ್ವರಿ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಶಿರಸಿ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 10, 2025ರ ಮಧ್ಯರಾತ್ರಿ 1.15ರ ಸುಮಾರಿಗೆ ದೇವಾಲಯದ ಸ್ಟೀಲಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ದೇವರ ಮೂರ್ತಿಯ ಮೇಲಿದ್ದ ಬಂಗಾರ-ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 80, ಸಾವಿರ ನಗದು ಸೇರಿದಂತೆ ಒಟ್ಟು 2,31,400 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದರು.

ಈ ಕುರಿತು ಪರಶುರಾಮ ಮಾದೇವ ಶೆಟ್ಟಿ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗುನ್ನಾ ನಂ.141/2025, ಕಲಂ 331(4), 305 ಬಿ.ಎನ್.ಎಸ್-2023ರಡಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಯಿತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್. (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ (ಕೆಎಸ್ಪಿಎಸ್), ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕ ಶಶಿಕಾಂತ ವಮರ್, ಮತ್ತು ಶಿರಸಿ ಗ್ರಾಮೀಣ ಠಾಣೆಯ ಪಿಎಸ್ಐಗಳು ಸಂತೋಷಕುಮಾರ ಎಂ. ಹಾಗೂ ಅಶೋಕ ರಾಠೋಡ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು.

ತಾಂತ್ರಿಕ ವಿಭಾಗದ ಸಹಾಯದಿಂದ ತಂಡ ಬೆಂಗಳೂರು, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿತರಾದ
ಬಾಲಕುಮಾರ ವಾಸು ಕೆ @ ಬಾಲರಾಜು ಸ್ವಾಮಿ (ಅಂತರಗಂಗೆ, ಭದ್ರಾವತಿ, ಹಾಲಿ ವಾಸ: ಬೆಂಗಳೂರು)
ಮಹಮ್ಮದ್ ಅಲಿ ಅಲಿಕಾಕಾ @ ಜಯರಾಜ್ (ಅಂತರಗಂಗೆ, ಭದ್ರಾವತಿ)
ಇವರನ್ನು ಬಂಧಿಸಿ ವಶಕ್ಕೆ ಪಡೆದಿದೆ.

ಆರೋಪಿತರಿಂದ 1,50,000 ಮೌಲ್ಯದ ಬೆಳ್ಳಿಯ ಆಭರಣ ಹಾಗೂ 60,000 ನಗದು ಹಣ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಪ್ರಕಾಶ ತಳವಾರ, ಮಹಾದೇವ ನಾಯ್ಕ, ವಿಘ್ನೇಶ್ವರ ಹೆಗಡೆ, ಮಹಾಂತೇಶ್, ಅರುಣಕುಮಾರ್, ದಾವುಲ್ಸಾಬ, ಲಕ್ಷ್ಮಣ, ಚೇತನ, ರವಿಕುಮಾರ್, ಗದಿಗೆಪ್ಪ, ಹಾಗೂ ತಾಂತ್ರಿಕ ಸಿಬ್ಬಂದಿ ಉದಯ ಗುನಗಾ ಮತ್ತು ಬಬನ್ ಕದಂ ಅವರು ಭಾಗವಹಿಸಿದ್ದರು.

ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ/ಕುಮಟಾ-ಬಳ್ಳಾರಿ ಬಸ್ ಪಲ್ಟಿ :49 ಪ್ರಯಾಣಿಕರಿಗೆ ಗಾಯ :‌‌ ಗಾಯಾಳುಗಳು ಆಸ್ಪತ್ರೆಗೆ ದಾಖಲು