ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ದಾಂಡೇಲಿಯ ಸತ್ಪುರುಷ ಶ್ರೀ ದಾಂಡೇಲಪ್ಪ ಜಾತ್ರಾ ಮಹೋತ್ಸವವು ವಿಜಯದಶಮಿ ದಿನ ಶ್ರದ್ಧಾಭಕ್ತಿಯಿಂದ ನಡೆಯಿತು.
ವಿಜಯದಶಮಿಯಂದು ಮಿರಾಸಿಗಲ್ಲಿಯಲ್ಲಿರುವ ಶ್ರೀ ದಾಂಡೇಲಪ್ಪ ದೇವಸ್ಥಾನದಿಂದ ಬೆಳಗಿನ ಜಾವ ಪಲ್ಲಕ್ಕಿ ಮೆರವಣಿಗೆಯು ಸುಮಂಗಲಿಯರ ಪೂರ್ಣ ಕುಂಭದೊಂದಿಗೆ ಹಾಲಮಟ್ಟಿ ದೇವಸ್ಥಾನಕ್ಕೆ ಹೊರಟಿತು. ಅಲ್ಲಲ್ಲಿ ಪೂಜಾ ವಿಧಿಗಳು ನೆರವೇರಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಿತು.
ಜಾತ್ರೆಯ ಅಂಗವಾಗಿ ಹಳಿಯಾಳ್ ರಸ್ತೆಯ ಮೂರ್ ನಂಬರ್ ಗೇಟಿನಿಂದ ಹಾಲಮಡ್ಡಿ ರಸ್ತೆಯವರೆಗಿನ ಇಕ್ಕಲಗಳಲ್ಲಿ ಬಗೆ ಬಗೆಯ ಆಟದ ಅಂಗಡಿಗಳು, ದಿನಸಿ ಅಂಗಡಿಗಳು ಜಾತ್ರಾ ಸಂಭ್ರಮಕ್ಕೆ ಸೊಬಗು ತಂದವು.
ಭಕ್ತರ ಸೇವೆಗಾಗಿ ವಿವಿಧ ಸಂಘಟನೆಗಳು ತಿಂಡಿ–ತಿನಿಸು, ಪಾನೀಯ ವಿತರಣೆ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಬುಧವಾರ ಬೆಳಗಿನ ಜಾವದಿಂದಲೇ ಭಕ್ತಾದಿಗಳು ಸರತಿಯಲ್ಲಿ ನಿಂತು ದೇವರಿಗೆ ಹಣ್ಣು–ಹಂಪಲುಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ಹರಕೆ ಹೊತ್ತ ಭಕ್ತರು ದೇವಸ್ಥಾನದ ಸುತ್ತಲೂ ದಿಂಡ ನಮಸ್ಕಾರ ಹಾಕಿ, ತುಲಾಭಾರ ಸೇವೆ ಸಲ್ಲಿಸಿ ಪುನೀತರಾದರು.
ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಜಾತಿ, ಮತ, ಧರ್ಮ ಮರೆತು ಭಕ್ತಿ ಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡರು.ಜಾತ್ರೆಯ ಸುರಕ್ಷತೆಯ ಹಿತದೃಷ್ಟಿಯಿಂದ 300ಕ್ಕೂ ಹೆಚ್ಚು ಪೊಲೀಸರಿಗೆ ಪಿಎಸ್ಐ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ಬಂದೋಬಸ್ತು ಒದಗಿಸಲಾಗಿತ್ತು. ಆಲೂರು ಗ್ರಾಮ ಪಂಚಾಯಿತಿ ಹಾಗೂ ತಾಲೂಕ ಆಡಳಿತ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿತ್ತು.