ಈ ಪೋಟೋದ ಮೇಲೆ ಕ್ಲಿಕ್ ಮಾಡಿ, ಕಡಿಮೆ ಬೆಲೆಯಲ್ಲಿ ನಿಮ್ಮಗೆ ಬೇಕಾದ ವಸ್ತುಗಳನ್ನ ಖರೀದಿಸಿ..

ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿಯಲ್ಲಿ ಸಾಗುತ್ತಿದೆ. ನಾವು ಹಾಗಾಗಿ ಯಾವುದೇ ಮಾತುಗಳನ್ನೂ ಆಡುತ್ತಿಲ್ಲ. ನಮ್ಮ ನಮ್ಮ ಪಕ್ಷ ನಮಗೆ ಪ್ರಾಮುಖ್ಯವೇ ಆದರೂ, ಮೈತ್ರಿಧರ್ಮದ ಪಾಲನೆ ಆಗಬೇಕಾಗಿದೆ. ಮೈತ್ರಿಧರ್ಮ ಪಾಲನೆ ಅಷ್ಟು ಸುಲಭವಲ್ಲ. ಅದು ಸೂಕ್ಷ್ಮವಾದ ವಿಚಾರ. ಅದನ್ನು ಮೀರಿ, ನಮನ್ನು ಕೆಣಕಿದರೆ, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಮುಖಂಡರ ಗಮನಕ್ಕೆ ತಂದು ನಾವೂ ಮಾತನಾಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಹಾಗೂ ಕೋರ್ ಕಮಿಟಿ ಸದಸ್ಯ ಸೂರಜ್ ನಾಯ್ಕ ಸೋನಿ ಎಚ್ಚರಿಸಿದರು. ಅವರು 2023 ರ ಚುನಾವಣಾ ಸಂಬಂಧ ಉಚ್ಚನ್ಯಾಯಾಲಯದ ತೀರ್ಪಿನ ನಂತರದ ಬಿಜೆಪಿ ವಿಜಯೋತ್ಸವ ಹಾಗೂ ಶಾಸಕರ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯಿಸಿ, ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ಮಾಹಿತಿಯನ್ನು ಹಂಚಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2023 ರ ಚುನಾವಣಾ ಮತ ಎಣಿಕೆಗೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯದ ತೀರ್ಪಿನ ನಂತರದಲ್ಲಿ ಕುಮಟಾದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಅದರಲ್ಲಿ ಶಾಸಕರು ಮಾತನಾಡುತ್ತಾ, ಕಣ್ಣೀರು ಹಾಕುತ್ತಾರೆ, ಅಲ್ಪ ಮತದಲ್ಲಿ ಮುಂದಿದ್ದರು ಎಂದೆಲ್ಲಾ ಹೇಳಿಕೆ ನೀಡಿದ್ದಾರೆ. ನನ್ನ ಜೊತೆಗೆ ಕುಮಾರಸ್ವಾಮಿ, ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ನನ್ನ ಗೆಳೆಯರ ಬಳಗದವರು ಇದ್ದಾರೆ. ಹಾಗಿದ್ದೂ ಕಣ್ಣಲ್ಲಿ ನೀರು ಹಾಕುವ ಜಾಯಮಾನ ನಿಮ್ಮದಿರಬಹುದು ನನ್ನದಲ್ಲ ಎಂದ ಅವರು, ಕ್ಷೇತ್ರದಲ್ಲಿ ನನ್ನ ನೆಲೆ ಜನ ಭರವಸೆ ಇಟ್ಟಿದ್ದಾರೆ. ಹೀಗಾಗಿ ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ನೀವು ಇಪ್ಪತ್ತು ಮತ, ಆರುನೂರು ಮತದಲ್ಲಿ ಗೆದ್ದು ಅದನ್ನೇ ಸಂಭ್ರಮಿಸುತ್ತೀರಿ, ಆದರೆ ಒಮ್ಮೆಯೂ ಚುನಾವಣೆಯಲ್ಲಿ ಗೆಲ್ಲದಿದ್ದರೂ 59 ಸಾವಿರ ಮತವನ್ನು ನಾನು ಪಡೆದುಕೊಂಡಿದ್ದೇನೆ. ಚುನಾವಣಾ ಮತ ಎಣಿಕೆಯಲ್ಲಿ 7-17 ನೇ ಸುತ್ತಿನ  ವರೆಗೂ ಮತದಲ್ಲಿ ನಾನು ಮುಂದಿದ್ದೆ. ಇದರಲ್ಲಿ ನನ್ನ ಹೋರಾಟವೂ ಇದೆ. ಹೀಗಾಗಿ ಹಗುರವಾಗಿ ಮಾತನಾಡಬೇಡಿ, ಮೈತ್ರಿಧರ್ಮವೂ ಇರುವುದರಿಂದ ಅದರ ಪಾಲನೆ ಕಲಿಯಿರಿ ಎಂದರು.

ನ್ಯಾಯಾಲಯದ ಮೆಟ್ಟಿಲೇರಿದ್ದು ಏಕೆ? ಎಂದು ವಿವರಿಸಿದ ಸೂರಜ್ ನಾಯ್ಕ ಸೋನಿ.
ಚುನಾವಣಾ ಮತ ಎಣಿಕೆಯ ನಂತರದಲ್ಲಿ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದು ಏಕೆ ಎಂಬ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸೂರಜ್ ನಾಯ್ಕ ಸೋನಿ, ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿಗಳು ಅವರ ಇಲಾಖಾ ವೆಬ್ಸೈಟ್ ನಲ್ಲಿ ಚುನಾವಣೆ ನಡೆದ ರಾತ್ರಿ, 10-05-2023 ರಂದು ಕುಮಟಾ ಕ್ಷೇತ್ರದಲ್ಲಿ ನಿಖರವಾಗಿ 1,45,336 ಮತ ಚಲಾವಣೆಯಾಗಿದೆ ಎಂದು ಹಾಕಿದ್ದಾರೆ. ಆದರೆ ಮೇ. 13 ನೇ ತಾರೀಖಿನ ಚುನಾವಣಾ ಮತ ಎಣಿಕೆಯ ದಿನ, 1,46,606 ಇವಿಎಂ ಓಟುಗಳು ಚಲಾವಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 1,270 ಓಟುಗಳು ಹೆಚ್ಚಿಗೆ ಕಾಣುತ್ತಿದೆ. ಅಲ್ಲಿಂದ ನಮಗೆ ಏನೋ ನಡೆದಿದೆ‌ ಎಂದು ಮನವರಿಕೆ ಆಗತೊಡಗಿತು. ಇದಕ್ಕೆ ಸಂಬಂಧಿಸಿದಂತೆ ನಮಗೆ 17ಎ. ಪಟ್ಟಿಯ ಅಗತ್ಯತೆ ಇತ್ತು. ಆದರೆ ಈ ದಾಖಲೆಗಳನ್ನು ಕೇಳಿದರೆ ಅವರು ಕೊಟ್ಟಿಲ್ಲ.‌ ಹೈಕೋರ್ಟ ನಲ್ಲಿಯೂ ಈ ಮಾಹಿತಿ ಕೇಳಿದಾಗ ಅದು ಸ್ಟಾಂಗ್ ರೂಂಮ್ ಸೇರಿದೆ ಎಂದು ಮಾಹಿತಿ ನೀಡಿದರು. ಇದೆಲ್ಲವನ್ನೂ ನಾವು ರಿಟ್ ಅರ್ಜಿಯಲ್ಲಿ ಸೇರಿಸಿದ್ದೇವೆ.

ಇದರ ಜೊತೆಗೆ ಹತ್ತು ಹಲವಾರು ನ್ಯೂನ್ಯತೆಗಳ ಬಗ್ಗೆ ನಾವು ಅರ್ಜಿ ಹಾಕಿದ್ದೇವೆ. ಚುನಾವಣಾ ಮತ ಎಣಿಕೆ ದಿನ ಬೆಳಗ್ಗೆ 10 ರಿಂದ 10:45 ರ ವರೆಗೆ ನಮ್ಮ ಮತ ಎಣಿಕೆ ಕೇಂದ್ರದಲ್ಲಿ ವೀಡಿಯೋ ರೆಕಾರ್ಡಿಂಗ್ ಆಗಿಲ್ಲ. ಮೊದಲು ನಾವು ಅದನ್ನು ಕೇಳಿದಾಗ ಅವರು ನಮಗೆ ವೀಡಿಯೋ ಕೊಟ್ಟಿರಲಿಲ್ಲ. ನಂತರದಲ್ಲಿ ಅದನ್ನು ನೀಡಿದರು. ಹೈಕೋರ್ಟ ಎಫ್.ಎಸ್.ಎಲ್ ಆಗಿಲ್ಲವೆಂದು ವೀಡಿಯೋವನ್ನು ಪರಿಗಣಿಸಿಲ್ಲ. ಮೂಲವಾಗಿ ವೀಡಿಯೋ ರೆಕಾರ್ಡಿಂಗ್ ಮಾಡಿದ್ದ ಚುನಾವಣಾ ಆಯೋಗದವರು ಎಫ್.ಎಸ್.ಎಲ್ ಮಾಡಬೇಕಿತ್ತು. ನ್ಯಾಯದೇವತೆಗಳ ಎದುರಿನಲ್ಲಿ‌ ನಾವು ಅದನ್ನು ಪ್ತಶ್ನೆಮಾಡಲು ಆಗುವುದಿಲ್ಲ ಹೀಗಾಗಿ ನಮಗೆ 17ಎ. ಮತ್ತು ವೀಡಿಯೋ ದಾಖಲೆ ಸಾದ್ಯವಾಗಲಿಲ್ಲ ಎಂದರು.

ಚುನಾವಣೆಯಲ್ಲಿ ಪ್ರತೀ ಬೂತ್ ಗೆ ಮೂರು ಮಶೀನ್ ಅಳವಡಿಸಲಾಗುತ್ತದೆ.  ಕಂಟ್ರೋಲ್‌, ಬ್ಯಾಲೆಟಿಂಗ್, ವಿ.ವಿ ಪ್ಯಾಡ್ ಗಳು ಇರುತ್ತದೆ. ಅದಕ್ಕೆ ಯು.ಐ.ಎನ್ ನಂಬರ್ ಇದ್ದು, ಪ್ರತೀ ಬೂತ್ ಗೆ ಬೇರೆಬೇರೆ ಇರುತ್ತದೆ. ಓಟಿಂಗ್ ದಿನ ಮಶೀನ್ ನಲ್ಲಿ ದೋಷಗಳಿದ್ದರೆ, ಅದಕ್ಕೆ ರಿಪ್ಲೇಸ್ಮೆಂಟ್ ರಿಪೋರ್ಟ ಮಾಡಲಾಗುತ್ತದೆ. ಚುನಾವಣಾ ಆಯೋಗದ ವರದಿ ಪ್ರಕಾರ ಅಧಿಕೃತವಾಗಿ 10 ಮಶೀನ್ ಗಳು ಬದಲಾವಣೆ ಮಾಡಲಾಗಿದೆ. ಆದರೆ ಅವರು ಕೊಟ್ಟ 17ಸಿ ವರದಿಯಲ್ಲಿ 21 ಮಶೀನ್ ಬದಲಾವಣೆಯಾಗಿರುವುದು ಕಂಡುಬರುತ್ತದೆ. ರಾಂಡಮೈಜೇಶನ್ ಲಿಸ್ಟ್ ಹಾಗೂ 17ಸಿ ಯನ್ನು ಗಮನಿಸಿದಾಗ 21 ಮಶೀನ್ ಬದಲಾವಣೆ ಮಾಡಿರುವುದು ಕಂಡುಬರುತ್ತದೆ ಎಂದರು.

ಈ ಬಗ್ಗೆ ಸೂಕ್ತ ಮಾಹಿತಿ ಒದಗಿಸುವಂತೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೂರಜ್ ನಾಯ್ಕ ಸೋನಿ, ಯಾವ ಯಾವ ಬೂತ್ ಗಳಿಗೆ ಯಾವ ಯಾವ ಮೆಷಿನ್ ಕೊಟ್ಟಿದ್ದಾರೆ ಎಂಬ ವರದಿಯನ್ನು ಮೊದಲೇ ನೀಡಲಾಗುತ್ತದೆ. ಸೆಕೆಂಡ್ ರಾಂಡಮೈಜೇಶನ್ ಲಿಸ್ಟ್ ನ ಪರೀಕ್ಷೆ ಜೊತೆಗೆ ರಿಸರ್ವ ಲಿಸ್ಟ್ ನೀಡಲಾಗುತ್ತದೆ. ಒಟ್ಟೂ 65 ಮಶೀನ್ ಗಳನ್ನು ರಿಸರ್ವ ಲಿಸ್ಟ್ ನಲ್ಲಿ ಇಡಲಾಗಿತ್ತು. ಆದರೆ ಕುಮಟಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಬೆಳವಣಿಗೆ ಬಹುದೊಡ್ಡ ಆಶ್ಚರ್ಯ, 7ಸಿ. ನಮಗೆ ಸಿಕ್ಕು ಪರೀಕ್ಷಿಸಿದಾಗ 21 ಕಡೆ ಮಶೀನ್ ಬದಲಾಗಿದ್ದು, ರಿಟನಿಂಗ್ ಆಫೀಸರ್ ಹೇಳಿಕೆ ಪ್ರಕಾರ ಕೇವಲ 10 ಮಶೀನ್ ಬದಲಾವಣೆ ಬಗ್ಗೆ ದಾಖಲೆ ಇಟ್ಟಿದ್ದಾರೆ. ಹಾಗಾದರೆ 10 ಮಷೀನ್ ರಿಸರ್ವ ಲಿಸ್ಟ್ ಇಂದ ಹೇಗೆ ಹೋಗಿದೆ? ಎಂದು ಪ್ರಶ್ನಿಸಿದ ಅವರು, ಇದು ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದರು.

ಬಹುದೊಡ್ಡ ಬೆಳವಣಿಗೆಯಲ್ಲಿ, ಅವರು ರಿಪ್ಲೇಸ್ಮೆಂಟ್ ಲಿಸ್ಟ್ ನಲ್ಲಿ ಬೂತ್ ನಂ.39 ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಆ ಬೂತ್ ನಂ.39 ನಲ್ಲಿ ಒಟ್ಟೂ 1,000 ಓಟುಗಳು ಬಿದ್ದಿದೆ. ಬೂತ್ ನಂ.39 ರಿಪ್ಲೇಸ್ಮೆಂಟ್ ಲಿಸ್ಟ್ ನಲ್ಲಿ ಇದ್ದು, ಆದರೆ ಮಷೀನ್ ರಿಸರ್ವ ಲಿಸ್ಟ್ ನಿಂದಲೇ ಹೋಗಿಲ್ಲ. ಮಷಿಮ್ ಹೊರಗಿನಿಂದ ಬಂದಿದ್ದು, ಹೀಗಾಗಿ ನಮಗೆ ಧೈರ್ಯ ಇತ್ತು. ಈ ಬಗ್ಗೆ ಮೊದಲೇ ಮಾಹಿತಿ ನೀಡಬಹುದಿತ್ತು. ಆದರೆ ನಾನು ಮೈತ್ರಿ ಧರ್ಮದಲ್ಲಿ ಇದ್ದ ಕಾರಣ ಈ ಬಗ್ಗೆ ಯಾವುದೇ ಪತ್ರಿಕಾಗೋಷ್ಠಿ ಮಾಡಿರಲಿಲ್ಲ ಎಂದರು.

ಉಚ್ಚನ್ಯಾಯಾಲಯಕ್ಕೆ ಹೋಗುವೆ.
ಕಾನೂನಿನ ಅಡಿಯಲ್ಲಿ ನ್ಯಾಯಾಲಯ ಗಮನಿಸುತ್ತದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ಅವುಗಳನ್ನು ಪ್ರಶ್ನಿಸುವ ಹಕ್ಕಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸತ್ಯವನ್ನು ತಡಮಾಡಿದರೆ ಅದನ್ನು ತಡೆಹಿಡಿದಂತೆ ಎಂಬ ಮಾತಿದೆ. ಹೀಗಾಗಿ ಸುಪ್ರೀಂ ಕೋರ್ಟಗೆ ಹೋಗಿ, ಬೂತ್ ನಂ.39 ನ್ನು ಅನರ್ಹ ಗೊಳಿಸಿ, ಆಯ್ಕೆ ನನಗೆ ಮಾಡಲು ಅವಕಾಶ ಇದೆಯೇ ಎಂದು ನೋಡುತ್ತಿದ್ದೇವೆ ಎಂದು ಸೂರಜ್ ನಾಯ್ಕ ಸೋನಿ ತಿಳಿಸಿದರು.

ಶಾಸಕರಿಗೇ ಅನುಮಾನವಿತ್ತೇ?
ಮೇ 13ಕ್ಕೆ ಶಾಸಕರ ಗೆಲುವು ಎಂದು ನಿರ್ಧಾರವಾಗಿತ್ತು. ಅದರ ವಿರುದ್ಧವೇ ನಾವು ರಿಟ್ ಅರ್ಜಿ ಸಲ್ಲಿಸಿದ್ದೆವು. ಅದು ವಜಾ ಆದನಂತರ ಅವರು ಮಾಡಿದ ಸಂಭ್ರಮ ಮತ್ತು ಅವರು ಕೊಟ್ಟ ಹೇಳಿಕೆಗಳು ನನಗೆ ನೋವು ತಂದಿದೆ. ಶಾಸಕರು ವಿಜಯೋತ್ಸವದಲ್ಲಿ ಜನರ ಮುಂದೆ ಕಣ್ಣೀರು ಹಾಕುತ್ತಿದ್ದರು ಎಂದಿರುವುದು ಹಾಗೂ ಎರಡು ಬೂತ್ ಗಳಲ್ಲಿ ಸಮಸ್ಯೆ ಇತ್ತು ಎಂದಿರುವುದು ಬೇಸರದ ಸಂಗತಿ. 2023 ರಲ್ಲಿ ವಿಜಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಗ ನಮ್ಮ ಮೈತ್ರಿ ಇರಲಿಲ್ಲ. ಆದರೆ ಅವರು ಮೊದಲೇ ಏಕೆ ವಿಜ್ರಂಭಣೆಯಿಂದ ಆಚರಿಸಿಲ್ಲ. ತಮ್ಮ ಗೆಲುವಿನಲ್ಲಿ ಏನಾದರೂ ತಪ್ಪಿತೆಂದು ಇವರಿಗೆ ಮೊದಲೇ ತಿಳಿದಿತ್ತೇ? ಅದರಲ್ಲಿ ಇವರೂ ಪಾಲುದಾರರಾಗಿದ್ದರೇ? ಎನಿಸುತ್ತಿದೆ ಎಂದ ಸೂರಜ್ ನಾಯ್ಕ ಸೋನಿ, ಅಲ್ಲಿ ನಡೆದಿರುವುದರ ಬಗ್ಗೆ ಇವರಿಗೂ ತಿಳಿದಿತ್ತು. ಹೀಗಾಗಿ ಅವರು ಆಗ ಸಂಭ್ರಮಾಚರಣೆ ಮಾಡದೇ ಈಗ ವಿಜಯೋತ್ಸವ ಮಾಡುತ್ತಿದ್ದಾರೆ. ಇದು ವಿಚಿತ್ರ ಎನಿಸುತ್ತಿದೆ ಎಂದರು.

ಮೈತ್ರಿ ಧರ್ಮ ಬಿಟ್ಟಿದ್ದು ಬೇಸರ.
ಈ ಪ್ರಕರಣ ದಾಖಲಿಸುವ ಮೊದಲು ಬಿಜೆಪಿ ಜೆಡಿಎಸ್ ಮೈತ್ರಿ ಇರಲಿಲ್ಲ. ಮೈತ್ರಿಯ ನಂತರದಲ್ಲಿ ನಾವು ಈ ಪ್ರಕರಣದ ಬಗ್ಗೆ ಯಾವುದೇ ಪತ್ರಿಕಾಗೋಷ್ಠಿಯನ್ನು ಮಾಡಿಲ್ಲ. ಮೈತ್ರಿ ಧರ್ಮವನ್ನು ನಮ್ಮ ಪಕ್ಷದವರು ಕಾಪಾಡಿಕೊಂಡು ಬಂದಿದ್ದೇವೆ. 2024 ರ ಎಂ.ಪಿ ಚುನಾವಣೆಯಲ್ಲಿ ನಾವು ಸಂಪೂರ್ಣವಾಗಿ ಬಿಜೆಪಿ ಜೊತೆಗೆ ಕೆಲಸ ಮಾಡಿ, ಅವರ ಗೆಲುವಿನಲ್ಲಿ ನಾವು ಪಾಲುದಾರರಾಗಿದ್ದೇವೆ. ಈ ಬಗ್ಗೆ ಕಾಗೇರಿಯವರೂ ಹೇಳಿದ್ದಾರೆ. ಆದರೆ ಮೈತ್ರಿ ಧರ್ಮವನ್ನು ಬಿಟ್ಟು, ಬಿಜೆಪಿ ಪಕ್ಷದ ಶಾಸಕರಾಗಿ, ಗೌರವಾನ್ವಿತ ಸ್ಥಾನದಲ್ಲಿದ್ದೂ ಇಂತಹ ಸಂದರ್ಭಗಳಲ್ಲಿ ವಿಜಯೋತ್ಸವ ಆಚರಿಸುತ್ತಾರೆ. ವಿಜೃಂಭಣೆಯಿಂದ ನಡೆದುಕೊಳ್ಳುತ್ತಾರೆ ಎಂದರೆ ಅವರ ಮನಸ್ಥಿತಿ ಏನು? ಎಂಬುದು ನನಗೆ ಅರ್ಥವಾಗಿದೆ.

ಇದನ್ನೂ ಓದಿ: ಕುಮಟಾಕ್ಕೆ ತೆರಳುತ್ತಿದ್ದ ಕಾರು ಅರಬೈಲ್ ಘಟ್ಟದಲ್ಲಿ ಭಸ್ಮ