ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರು ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎನ್ನುವ ಆಗ್ರಹ ಕೇಳಿ ಬರತ್ತಿದೆ.

ಆಸ್ಪತ್ರೆ ಸ್ಥಾಪನೆ ಕುರಿತ ಪ್ರಶ್ನೆಗೆ ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಅವರಿಗೆ ಅವಮಾನಕಾರಿ ರೀತಿಯಲ್ಲಿ “ನಿಮ್ಮ ಹೆರಿಗೆ ಮಾಡಿಸ್ತೀವಿ” ಸಾರ್ವಜನಿಕವಾಗಿ ನೀಡಿದ ಹೇಳಿಕೆ ಇದೀಗ ದೇಶಪಾಂಡೆ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರು, ಮಹಿಳಾ ಸಂಘಟನೆಗಳು, ಪತ್ರಕರ್ತರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಈ ಹೇಳಿಕೆಯನ್ನು ಖಂಡಿಸಿ, ದೇಶಪಾಂಡೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶಪಾಂಡೆ ವಿರುದ್ಧ ನೆಟ್ಟಿಗರೂ ತಮ್ಮದೇ ಶೈಲಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಬಿಜೆಪಿ ನಾಯಕರಿಂದ ಕೂಡ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಹಾಗೂ ಹಲವು ರಾಜ್ಯಮಟ್ಟದ ನಾಯಕರು ದೇಶಪಾಂಡೆ ಅವರ ಹೇಳಿಕೆ “ಅಸಭ್ಯ, ಅಸಾಮಾಜಿಕ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂಥದು” ಎಂದು ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯ್ ಪ್ರಸಾದ್ ಅವರು, “ಇದು ಕಾಂಗ್ರೆಸ್‌ ತಾಯಂದಿರು ಮತ್ತು ಮಹಿಳೆಯರನ್ನು ಅವಮಾನಿಸುವುದು ರಾಜಕೀಯವಲ್ಲ, ಇದು ನೈತಿಕ ದಿವಾಳಿತನ” ಎಂದು ಟೀಕಿಸಿದ್ದಾರೆ.

ಹಳಿಯಾಳ‌ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು, “ಜನತೆ ಆಯ್ಕೆ ಮಾಡಿದ ಪ್ರತಿನಿಧಿ ಹೀಗೆ ವರ್ತಿಸುವುದು ಖಂಡನೀಯ. ಜನರ ಸಮಸ್ಯೆಯನ್ನು ಗೌರವದಿಂದ ಕೇಳಿ ಪರಿಹಾರ ನೀಡಬೇಕೆ ಹೊರತು ಈ ರೀತಿಯಾಗಿ, ಅವಮಾನಿಸುವ ಪದ ಬಳಕೆ ಮಾಡಿರುವುದು ಅಸಭ್ಯತನದ ಸೂಚಕ” ಎಂದಿದ್ದಾರೆ. , ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕು ಹಾಗೂ ದೇಶಪಾಂಡೆ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿದಿದ್ದರೂ, ಪಕ್ಷದ ಒಳಗೇ ದೇಶಪಾಂಡೆ ಅವರ ಹೇಳಿಕೆಯನ್ನು ಖಂಡಿಸುವ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಇವರ ಈ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ತಲೆ ತಗ್ಗಿಸುವಂತಾಗಿದೆ..

ಇದನ್ನೂ ಓದಿ:ಅಂಕೋಲಾದ ಹೊಟೇಲ್‌ ಒಂದರ ಮೇಲೆ ಹಠಾತ್ ದಾಳಿ : ಮಾಲೀಕರಿಗೆ ನೋಟಿಸ್ ಜಾರಿ