ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಸಕರಾದ ಆರ್.ವಿ. ದೇಶ್‌ಪಾಂಡೆ ಅವರು ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಹೇಳಿದ ಪ್ರಶ್ನೆಗೆ ಅವಮಾನಿಸಿ ವಿವಾದಾತ್ಮಕವಾಗಿ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳಿಯಾಳದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನೀಲ್ ಹೆಗಡೆ, ದೇಶ್‌ಪಾಂಡೆ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿ, “ದೇಶ್‌ಪಾಂಡೆ ಅವರು ಅಪ್ರಬುದ್ಧ ಹಾಗೂ ಅಸಾಮಾಜಿಕ ನಡವಳಿಕೆ ತೋರಿದ್ದಾರೆ. ಮಹಿಳೆಯರ ಜತೆ ಅಸಂಬದ್ಧವಾಗಿ ಮಾತನಾಡಿರುವುದು ಖಂಡನೀಯ,” ಎಂದು ಟೀಕಿಸಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಗೌರವ ನೀಡುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿದ್ದರೂ, ಅದರ ಪ್ರತಿನಿಧಿಯಾಗಿರುವ ದೇಶ್‌ಪಾಂಡೆ ಅವರು ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
“ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿಯವರೂ ಮಹಿಳೆಯರೇ. ಅವರ ಬಗ್ಗೆ ದೇಶ್‌ಪಾಂಡೆ ಅವರ ಭಾವನೆ ಏನು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ,” ಎಂದು ಪ್ರಶ್ನಿಸಿದ ಹೆಗಡೆ, ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತಕ್ಷಣ ದೇಶ್‌ಪಾಂಡೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ದೇಶ್‌ಪಾಂಡೆ ಅವರ ಈ ಹೇಳಿಕೆಯನ್ನು ಬೆಂಬಲಿಸುವ ಕಾರ್ಯಕರ್ತರು ಮಹಿಳೆಯರ ಗೌರವವನ್ನು ಕಳೆದುಕೊಂಡಂತೆಯೇ ಆಗುತ್ತದೆ. ಒಂದು ವೇಳೆ ಬೆಂಬಲಿಸಿದರೆ, ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಯಿಂದ ಪ್ರಯೋಜನ ಪಡೆದ ಮಹಿಳೆಯರ ಮೇಲಿನ ಗೌರವವಿಲ್ಲವೆಂದು ತೋರುತ್ತದೆ,” ಎಂದು ಅವರು ಎಚ್ಚರಿಸಿದರು. ಹೆಗಡೆ ಅವರು ಮುಂದುವರಿಸಿ, “ದೇಶ್‌ಪಾಂಡೆ ಅವರ ವರ್ತನೆ ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದನ್ನು ಬಿಜೆಪಿ ಹಿಂಜರಿಯುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.