ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 35ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಕದ್ರ ಠಾಣೆಯ ಪೊಲೀಸರು ಕಾರವಾರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ‌ ಒಪ್ಪಿಸಿದ್ದಾರೆ.

ಎಲಿಯಾಸ್ ತಂದೆ ಜೋಸೆಫ್ ಫರ್ನಾಂಡಿಸ್ ಎಂಬಾತನೆ  35ವರ್ಷಗಳಿಂದ ತಲೆ ಮರೆಸಿಕೊಂಡು ಇದೀಗ ಪೊಲೀಸ್ ಬಂಧನಕ್ಕೆ ಒಳಗಾಗಿರುವ ಆರೋಪಿಯಾಗಿದ್ದಾನೆ. ಈತ ಮೂಲತಃ  ಶಿವಮೊಗ್ಗ ಜಿಲ್ಲೆಯ, ಹೊನ್ನಳ್ಳಿ ತಾಲೂಕಿನ ಸಾವಳಂಗ ಗ್ರಾಮದ ಹೊಸಜೋಗ ನಿವಾಸಿಗಿದ್ದಾನೆ. ಈತ 1990ರಲ್ಲಿ ಕ್ರದಾ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದ  ಪ್ರಕರಣ ಒಂದರಲ್ಲಿ ಇದುವಗೆಗೂ ನ್ಯಾಯಾಲಯಕ್ಕೆ ಹಾಜರಾಗದೆ 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ . ಕದ್ರಾ ಠಾಣೆಯ ಪಿಎಸ್‌ಐ ಸುನೀಲ್ ಬಂಡಿವಡ್ಡರ್ ಅವರ ನೇತೃತ್ವದ ವಿಶೇಷ ತಂಡ ಇದೀಗ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅವರನ್ನು ಸೆಪ್ಟೆಂಬರ್ 1, 2025 ರಂದು ಕಾರವಾರದಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ : 1990 ರ ಅಕ್ಟೋಬರ್ 29 ರಂದು  ಫ್ರಾನ್ಸಿಸ್ ಸಂತಾನ್ ಫರ್ನಾಂಡಿಸ್ ಅವರ ದೂರು ಆಧರಿಸಿ ಕದ್ರಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 144/1990 ಅನ್ನು ಕಲಂ 147, 143, 148, 326, 341, 342 ಹಾಗೂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ಏಳು ಜನ ಆರೋಪಿತರ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಆದರೆ A1 ಆರೋಪಿ ಎಲಿಯಾಸ್ ವಿಚಾರಣಾ ಅವಧಿಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಪ್ರಕರಣವನ್ನು ಎಲ್.ಪಿ.ಸಿ. (Long Pending Case) ಎಂದು ಪರಿಗಣಿಸಿ, ಅವರ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು.

ಕಾರ್ಯಾಚರಣೆಯಲ್ಲಿ ಎಎಸ್‌ಐ ಮಾಧವ ಫಳ್, ಸಂತೋಷ ತಳೇಕರ ಹಾಗೂ ಸಿಬ್ಬಂದಿಗಳಾದ ತನೋಜ ಬೈಲೂರ, ಪ್ರದೀಪ್ ದುಮ್ಯಾಲ್, ಅಶೋಕ ದೇವರಮನಿ, ಮಹೇಶ್ ಸಾಂವಸಗಿ, ವಿಠಲ್ ಕೋತ್, ಆರೀಪ್ ಕಟಗಿ ಅವರು ಭಾಗವಹಿಸಿದ್ದರು.

ಆರೋಪಿಯನ್ನು ಪತ್ತೆಹಚ್ಚಿರುವುದಕ್ಕೆ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜೆ, ಜಗದೀಶ ನಾಯ್ಕ ಹಾಗೂ ಕಾರವಾರ ಉಪಾಧೀಕ್ಷಕರಾದ ಎಸ್.ವಿ. ಗಿರೀಶ್ ಮತ್ತು ಸಿಪಿಐ ಪ್ರಕಾಶ್ ದೇವಾಡಿಗ ಅವರು ವಿಶೇಷ ತಂಡವನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ರಾಧ‌ಹಿರೇಗೌಡರ್‌ಗೆ ಹೆರಿಗೆ ಮಾಡಸ್ತಿನಿ ಎಂದ ಶಾಸಕ ಆರ್ ವಿ ದೇಶಪಾಂಡೆ