ಮಿತ ಮಾತು, ನೇರ ನುಡಿ ;ಸ್ಪಷ್ಟ ನಡೆ ;ನುಡಿದಂತೆ ನಡೆಯಲು ಪ್ರಯತ್ನಿಸುವ ; ನಡೆಯಲು ಸಾಧ್ಯವಾಗುವಂತೆ ನುಡಿಯುವ ಮನುಷ್ಯ ಇದ್ದುದನ್ನು ಇದ್ದಂತೆ ಒಪ್ಪಿಕೊಳ್ಳುವ ಮತ್ತು ಇಲ್ಲದ್ದನ್ನು ಇಲ್ಲವೆಂದು* ನೇರವಾಗಿ ಹೇಳುವ ಸರಳ ವ್ಯಕ್ತಿ. ಅಂಗೈಯಲ್ಲಿ ಆಕಾಶ ತೋರಿಸುವವರಲ್ಲ.ಆಕಾಶಕ್ಕೆ ಏಣಿ ಹಾಕುವವರೂ ಅಲ್ಲ.

ತಮ್ಮ 31 ವರ್ಷಗಳ ಶಿಕ್ಷಕ ಸೇವೆ ಯಲ್ಲಿ ಎಲ್ಲಿಯೂ ಎಲ್ಲೆ ಮೀರದ ಹಾಗೆ ನಡೆದುಕೊಂಡಂತಹ *ಶಿಕ್ಷಕ ಉಮೇಶ ದೇವಪ್ಪ ನಾಯ್ಕ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸ.ಕಿ.ಪ್ರಾ.ಶಾಲೆ ಸಿದ್ದಯ್ಯನದೊಡ್ಡಿ (ಕಡಸಿಕೊಪ್ಪ) ಶಾಲೆ ಯಲ್ಲಿ 1994ರಲ್ಲಿ ಸೇವೆ ಪ್ರಾರಂಭಿಸಿದ ಇವರು ಅವಿಶ್ರಾಂತ ದುಡಿಮೆಗಾರ.

ಹೊನ್ನಾವರ ತಾಲೂಕಿನ ಕೆರೆಕೋಣ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಶಾಲೆ ಭೌತಿಕವಾಗಿಯೂ ಶೈಕ್ಷಣಿಕವಾಗಿಯೂ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಉತ್ತುಂಗ ಸ್ಥಿತಿಯಲ್ಲಿದ್ದುದ್ದನ್ನು ಇಂದಿಗೂ ಅಲ್ಲಿನ ಪಾಲಕರು ನೆನಪಿಸಿಕೊಳ್ಳುತ್ತಾರೆ.

2002 ರಿಂದ 2009ರ ವರೆಗೆ ಸತತ ಎಂಟು ವರ್ಷ , ಶಾಲೆಯ ಖೋಖೋ ತಂಡವು ಜಿಲ್ಲಾಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದ್ದರ ಬಗ್ಗೆ ಅಭಿಮಾನ ಪಡುತ್ತಾರೆ.ಇಂದಿಗೂ ಸತತ ಸಂಪರ್ಕ ಇಟ್ಟುಕೊಂಡು ಗೌರವಾದರಗಳಿಂದ ಮಾತನಾಡುತ್ತಾರೆ .ಸಾಲಕೋಡ ಕ್ಲಸ್ಟರ್ ಸಿಆರ್ ಪಿ ಯಾಗಿ ಕಾರ್ಯನಿರ್ವಹಿಸುವಾಗ ಶಿಕ್ಷಕರೊಂದಿಗೆ ಆತ್ಮೀಯವಾಗಿ ಬೆರೆತು ಅವರೆಲ್ಲರಿಂದ ಅತ್ಯಂತ ಖುಷಿಯಿಂದ ಕೆಲಸ ಪಡೆದಂತಹ ಹೆಗ್ಗಳಿಕೆ ಇವರದು.

ಶಾಲೆಯಲ್ಲಿ ಮಕ್ಕಳಿಲ್ಲದೆ ಸೊರಗುತ್ತಿದ್ದ ಗೋಕರ್ಣದ ಅಜ್ಜಿಹಕ್ಕಲ ಶಾಲೆಯ ಚಿತ್ರಣವನ್ನೇ ಬದಲಾಯಿಸಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು, ಜನಪ್ರತಿನಿಧಿಗಳ ಸಹಯೋಗದೊಂದಿಗೆ ಶಾಲೆಯ ಭೌತಿಕ ಸ್ಥಿತಿಗತಿಯನ್ನು ಸುಧಾರಿಸಿ ತಮ್ಮ ಕಾಳಜಿಯುಕ್ತ ಕಾರ್ಯ ಶೈಲಿಯಿಂದ ಶೈಕ್ಷಣಿಕ ಅಭಿವೃದ್ಧಿ ಸಾಧಿಸಿದ್ದರ ಪರಿಣಾಮವಾಗಿ ಅಂದು ಕಾನ್ವೆಂಟಿಗೆ ಹೋಗುವ ಮಕ್ಕಳು ಕೂಡ ಇಂದು ಅಜ್ಜಿಹಕ್ಕಲ ಸರ್ಕಾರಿ ಶಾಲೆಯತ್ತ ಮುಖ ಮಾಡುವ ವಾತಾವರಣ ನಿರ್ಮಿಸಿದ್ದಾರೆ.ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕರೆನಿಸಿದ್ದಾರೆ.

2015 ರಲ್ಲಿ ಕೇವಲ ಒಂಭತ್ತು ಮಕ್ಕಳಿದ್ದ ಶಾಲೆ ಇಂದು ಮೂವತ್ತು ಮಕ್ಕಳಿಗೆ ಅಕ್ಷರ ತಾಣವಾಗಿ ಬೆಳೆದಿರುವುದು ಅವರ ಶ್ರೇಷ್ಠ ಕಾರ್ಯಕ್ಕೆ ಸಾಕ್ಷಿ. ಕಲಿಕೆಗೆ ಸ್ಮಾರ್ಟ್ ಟಿವಿ, ಎಲ್ಲಾ ಮಕ್ಕಳಿಗೆ ಪೀಠೋಪಕರಣ, 25 ಲಕ್ಷ ರೂಪಾಯಿ ಅನುದಾನದ ಹೊಸ ಕಟ್ಟಡ, ಶಾಲಾ ಕೊಠಡಿಗಳ ಜೀರ್ಣೋದ್ಧಾರ , ಆವರಣ ಗೋಡೆ ನಿರ್ಮಾಣ ,ದಾನಿಗಳಿಂದ ಕಪಾಟು ,ಎಲ್ಲಾ ಕೋಣೆಗಳಿಗೆ ಟೈಲ್ಸ್ ಅಳವಡಿಕೆ ಕಟ್ಟಡಕ್ಕೆ ಶಾಲೆಯು ಸುಣ್ಣ ಬಣ್ಣ. ಹೀಗೆ ಶಾಲೆ ಸುಸಜ್ಜಿತವಾಗಿಯೂ ಆಕರ್ಷಕವಾಗಿಯೂ ಕಂಗೊಳಿಸುವಂತಾಗಿದ್ದು ಅವರ ಶ್ರಮದ ಫಲ.

ಹೊನ್ನಾವರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶಕ ಸದಸ್ಯರಾಗಿ ,ತಾಲೂಕು ಕ್ರೀಡಾಕೂಟದ ಸಂಚಾಲಕರಾಗಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಮಾಡಿದ ಸಮಾಜಮುಖಿ ಕಾರ್ಯಗಳು ಅನುಕರಣೀಯ.ತಮ್ಮ ಸಮರ್ಪಣಾಭಾವದ ಸೇವೆಯಿಂದ ಜನಮಾನಸದ ಗಮನ ಸೆಳೆದ ಇವರು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೇವೆಯುದ್ದಕ್ಕೂ ತನ್ನತನವನ್ನು ಉಳಿಸಿಕೊಂಡು, ತನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿ, ತಾವು ಕೆಲಸ ನಿರ್ವಹಿಸಿದ ಕಡೆಗಳಲ್ಲೆಲ್ಲಾ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಅದರ ಅಚ್ಚು ಇಂದಿಗೂ ಉಳಿಯುವಂತೆ ಮಾಡಿದ ಶ್ರೀ ಉಮೇಶ ನಾಯ್ಕರ ನಿವೃತ್ತಿ ಜೀವನ ಆರೋಗ್ಯ ಆನಂದದಿಂದ ಕೂಡಿರಲಿ.

-✍🏻✍🏻 *ಮೋಹನ ನಾಯ್ಕ ಬರ್ಗಿ