ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಭಾರೀ ಮಳೆಯಿಂದಾಗಿ ಭಾಸ್ಕೇರಿಯಲ್ಲಿ ತೆರೆಯಲಾಗಿರುವ ಕಾಳಜಿ‌ ಕೇಂದ್ರಕ್ಕೆ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಎಲ್. ನಾಯ್ಕ ಅವರು ಭೇಟಿ ನೀಡಿ ಜನರ ಸಂಕಷ್ಟ ಆಲಿಸಿ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ.

ಗೇರುಸೊಪ್ಪಾ ಹಾಗೂ ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿರುವ ಹಿನ್ನಲೆಯಲ್ಲಿ, ಈ ಎರಡು ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ಶರಾವತಿ‌ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಹೊನ್ನಾವರ ತಾಲೂಕಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾಸ್ಕೇರಿ ಗ್ರಾಮದಲ್ಲಿಯೂ ಸಹ ಭಾರೀ ಪ್ರಮಾಣದ ನೀರು ಮನೆ ಹಾಗೂ ತೋಟಗಳಿಗೆ ನುಗ್ಗಿ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಗ್ರಾಮದ 18 ಕುಟುಂಬಗಳ 46 ಜನರನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾಹಿತಿ ಸಿಕ್ಕ ತಕ್ಷಣ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಯಾಗಿರುವ ಮಂಜುನಾಥ ಎಲ್ ನಾಯ್ಕ ಅವರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂಕಷ್ಟದಲ್ಲಿರುವವರೊಂದಿಗೆ ಮಾತುಕತೆ ನಡೆಸಿ ಅವರಿಗೆ ದೈರ್ಯ ತುಂಬಿದರು. ಜೊತೆಗೆ ತಿಂಡಿ, ತಿನಿಸು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ನೆರವಾಗಿದರು. “ಯಾವುದೇ ಕಷ್ಟ ಬಂದರೂ ನನ್ನನ್ನು ಸಂಪರ್ಕಿಸಿ, ನಾನು ಸದಾ ನಿಮ್ಮ ಜೊತೆಗಿದ್ದೇನೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿನಾಯಕ ಶೆಟ್ಟಿ, ಸುಬ್ರಹ್ಮಣ್ಯ, ಗಜಾನನ, ಈಶ್ವರ ಮುಕ್ರಿ ಸೇರಿದಂತೆ ಹಲವರು ಹಾಜರಿದ್ದರು.

ಇದನ್ನೂ ಓದಿ: ಡಿವೈನ್ ಸ್ಟೆಪ್ಸ್ ನೃತ್ಯ ಸ್ಪರ್ಧೆಯಲ್ಲಿ ಈಶಾನಿ ಹಿರೇಗುತ್ತಿಗೆ ದ್ವಿತೀಯ ಸ್ಥಾನ