ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಇತ್ತೀಚಿಗಷ್ಟೇ ಬೂಕರ್ ಪ್ರಶಸ್ತಿ ಪಡೆದಿರುವ ಕತೆಗಾರ್ತಿ ಬಾನು ಮುಷ್ತಾಕ್ ಅವರನ್ನು ದಸರಾ ಉತ್ಸವ ಉದ್ಘಾಟನೆಗೆ ಕರ್ನಾಟಕ ಸರಕಾರ ಆಮಂತ್ರಿಸಿರುವುದು ಅಲ್ಪಸಂಖ್ಯಾತರನ್ನು ಓಲೈಸುವ ಹುನ್ನಾರದ ಭಾಗವಾಗಿದೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಈಶ್ವರ ನಾಯ್ಕ ಖಂಡಿಸಿದ್ದಾರೆ.
ಈ ಪ್ರಸ್ತಾಪದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಈಶ್ವರ ನಾಯ್ಕ ಈ ವಿಚಾರದಲ್ಲಿ ಮರು ಪರಿಶೀಲನೆ ಅಗತ್ಯ ಎಂದು ತಿಳಿಸಿದರು.ಸಹಜವಾಗಿಯೇ ಕಾಂಗ್ರೆಸ್ಸಿಗರು ಸರ್ಕಾರದ ನಡೆಯನ್ನು ಸ್ವಾಗತಿಸುತ್ತಿರುವುದು, ಕಾಂಗ್ರೆಸ್ಸು ಅಲ್ಪಸಂಖ್ಯಾತರನ್ನು ಓಲೈಸಲೆಂದೇ ಆಯ್ಕೆ ಮಾಡಿದ್ದಾರೆಂಬುದು ಆಪಾದನೆಯಾಗಿದೆ.ಮೈಸೂರು ದಸರಾ ಎನ್ನುವುದು ಕನ್ನಡನಾಡಿನ ನಾಡಹಬ್ಬವಾಗಿ ಪ್ರತಿಯೊಬ್ಬರ ಧಾರ್ಮಿಕ ನಂಬಿಕೆಯ ಅಸ್ಮಿತೆಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಕರ್ನಾಟಕದ ಪ್ರತಿ ಭಾಗದ ಜನರು ನಾಡಹಬ್ಬವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೋಡಿ ಕಣ್ತುಂಬಿಕೊಂಡು ಬರುತ್ತಿರುವುದು ನಮ್ಮ ಹೆಮ್ಮೆಯ ಪರಂಪರೆ.
ಆದರೆ ಕನ್ನಡ ಭುವನೇಶ್ವರಿಯನ್ನು ಸಂಶಯದಿಂದ ನೋಡುವ ವ್ಯಕ್ತಿಗಳಿಂದ ಉದ್ಘಾಟನೆಯಾಗುತ್ತಿರುವುದು ವಿಷಾದನೀಯ. ಬಾನು ಮುಷ್ತಾಕ್ ಅವರು ಈ ಹಿಂದೆ ಒಂದು ಸಂದರ್ಭದಲ್ಲಿ ಕನ್ನಡ ತಾಯಿ ಎಂದೇ ಕನ್ನಡಿಗರು ಭಾವಿಸಿರುವ ಭುವನೇಶ್ವರಿ ದೇವಿಯ ಬಗ್ಗೆ ಅಪಸ್ವರವೆತ್ತಿದ್ದಾರೆಂಬುದು ಇವರ ಹಿಂದಿರುವ ಆರೋಪ. ಬೂಕರ್ ಪ್ರಶಸ್ತಿ ವಿಜೇತರು ಎನ್ನುವುದು ಅವರಿಗೊಂದು ಆಧಾರ. ಬಿಜೆಪಿಯವರಿಗೆ ಬಾನು ಮುಷ್ತಾಕ್ ಯಾವ ಧರ್ಮದವರು ಎನ್ನುವುದು ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾ ಇಲ್ಲ, ವೈಯಕ್ತಿಕವಾಗಿ ಭೂಕರ್ ಪ್ರಶಸ್ತಿ ಪಡೆದಿರುವ ಭಾನು ಮುಷ್ತಾಕರ ಮೇಲೆ ನಮಗೆ ಅತ್ಯಂತ ಗೌರವ ಇದೆ.ಈ ಹಿಂದೆ ಕವಿ ಕೆ.ಎಸ್. ನಿಸಾರಹ್ಮದರಂಥವರು ಉದ್ಘಾಟಿಸಿದಾಗ ನಮ್ಮ ಪಕ್ಷ ಸ್ವಾಗತಿಸಿದ್ದನ್ನು ಪ್ರಸ್ತಾಪಿಸುತ್ತಾ, ಭಾನು ಮುಷ್ತಾಕ್ ರವರಿಗೆ ಇರುವ ಮನೋಧರ್ಮ ಎಂತಹದು ಎನ್ನುವುದನ್ನು ನಾಡಹಬ್ಬದ ಈ ಸಂದರ್ಭದಲ್ಲಿ ಪ್ರಶ್ನೆ ಏಳುತ್ತದೆ.
ಇದು ಜನರ ಮೇಲಿರುವ ನಂಬಿಕೆಯ ಪ್ರಶ್ನೆಯಾಗಿದ್ದು, ಒಂದು ವೇಳೆ ಅವರಿಗೆ ಕನ್ನಡ ತಾಯಿ ಭುವನೇಶ್ವರಿಯ ಕುರಿತಾಗಿಯೇ ಶ್ರದ್ಧೆ ಇಲ್ಲವೆಂದಾದರೆ, ಕನ್ನಡಿಗರ ಆರಾಧ್ಯ ದೈವವಾದ ತಾಯಿ ಚಾಮುಂಡೇಶ್ವರಿಯ ಮೇಲೆ ಶ್ರದ್ಧೆ ಇರಲು ಹೇಗೆ ಸಾಧ್ಯ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಬೇಕಾಗುತ್ತದೆ. ದಸರೆ ಅಥವಾ ನವರಾತ್ರಿ ಹಬ್ಬ ಹಿಂದೂಗಳಿಗೆ ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು, ಅದನ್ನು ನಾಡಹಬ್ಬವಾಗಿಯೂ ಆಚರಿಸುತ್ತಿರುವಾಗ ಜನರ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸಬೇಕಾಗುತ್ತದೆ.
ಪ್ರಶಸ್ತಿಯನ್ನೇ ಅರ್ಹತೆ ಎಂದು ತಿಳಿದು ನಾಡ ಹಬ್ಬವನ್ನು ಉದ್ಘಾಟಿಸುವುದಾದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಶ್ರೀ ಅನಂತ್ ನಾಗ್ ಅಥವಾ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಂತಾರ ಸಿನಿಮಾದ ನಟ ಶ್ರೀ ರಿಷಬ್ ಶೆಟ್ಟಿ ಇವರಿಂದ ಉದ್ಘಾಟನೆ ಮಾಡಲು ಆಮಂತ್ರಿಸಿ ಎನ್ನುವುದು ನಮ್ಮ ಪಕ್ಷದ ನಿಲುವಾಗಿದೆ.ಮುಂದಿನ ವರ್ಷ ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ವಹಿಸಲು ಆಮಂತ್ರಿಸುತ್ತಿರುವ ವಿಷಯಕ್ಕೆ ತಕರಾರನ್ನು ಮಾಡದೇ ಇರುವ ನಾವು, ಧಾರ್ಮಿಕ ಭಾವನೆಗಳಿಂದ ಕೂಡಿರುವ, ನಾಡಹಬ್ಬದ ಸಂದರ್ಭದಲ್ಲಿ ಧರ್ಮದ ವ್ಯಾಖ್ಯಾನವನ್ನು ಮತ್ತು ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸದೇ ಕೇವಲ ವೋಟ್ ಬ್ಯಾಂಕ್ ಗಾಗಿ ನಾಡ ಹಬ್ಬದಂತಹ ಉತ್ಸವಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಈಶ್ವರ ನಾಯ್ಕರವರು ತೀವ್ರವಾಗಿ ಖಂಡಿಸಿದ್ದಾರೆ.
ಕೂಡಲೇ ಸರ್ಕಾರ ಈ ನಿರ್ಣಯವನ್ನು ಮರು ಪರಿಶೀಲನೆ ಮಾಡಿ ಕರ್ನಾಟಕ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ನಾಡಹಬ್ಬವನ್ನು ಸರ್ವರೂ ಒಪ್ಪುವ ರೀತಿಯಲ್ಲಿ ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಿ ಉದ್ಘಾಟಿಸಲು ಅನುವು ಮಾಡಿಕೊಡಬೇಕೆಂದು ಈಶ್ವರ ನಾಯ್ಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಾಂಡೇಲಿಯಲ್ಲಿ ಮೊಸಳೆ ಭೀತಿ! ಜಾನುವಾರು ತಿಂದುಬಿಟ್ಟ ಮೊಸಳೆಗಳು