ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅಧ್ಯಯನಪೂರ್ಣ ವರದಿಗಾರಿಕೆ ಇಂದಿನ ಅಗತ್ಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅಭಿಪ್ರಾಯಪಟ್ಟರು. ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ , ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾರವಾರ ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರ ಕೆಲಸದ ಒತ್ತಡ ಮತ್ತು ಶ್ರಮವನ್ನು ಶ್ಲಾಘಿಸಿದರು.ಪತ್ರಕರ್ತರು ಪ್ರತಿ ಗ್ರಾಮದ ಹಾಗೂ ಜಿಲ್ಲಾಡಳಿತದ ಆಡಳಿತ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಎಂದರು. ಜಿಲ್ಲಾಧಿಕಾರಿಯಾಗಿ ಈ ಜಿಲ್ಲೆಗೆ ಬಂದು ಒಂದು ವರ್ಷವಾಯಿತು. ನಾನು ಬಂದಾಗ ಭೂಕುಸಿತ, ಪ್ರವಾಹ, ಸೇರಿದಂತೆ ಎಲ್ಲ ಬಗೆ ಮಳೆಗಾಲದ ಕಷ್ಟಗಳನ್ನು ನೋಡಿದೆ. ಆಗ ಪತ್ರಕರ್ತರ ಶ್ರಮ ಏನೆಂದು ತಿಳಿಯಿತು. ಅಧಿಕಾರಿಗಳಿಗೆ ಸಮಯದ ಒತ್ತಡ ಇರಲ್ಲ, ಆದರೆ ಮಾಧ್ಯಮದವರಿಗೆ ಒತ್ತಡ ಹೆಚ್ಚು. ಅಂದಿನ ಕೆಲಸವನ್ನು ಅಂದೇ ಮುಗಿಸಬೇಕು. ಈ ಕೆಲಸಕ್ಕೆ ಕುಟುಂಬದ ಸಹಕಾರವೂ ಅಗತ್ಯ, ಅದಕ್ಕಾಗಿ ಅವರ ಕುಟುಂಬಕ್ಕೂ ಧನ್ಯವಾದಗಳು ಎಂದರು.
ಪತ್ರಿಕೆಗಳನ್ನು ನಿಯಮಿತವಾಗಿ ಓದುವುದರಿಂದ ಜಿಲ್ಲೆಯ ಸ್ಥಿತಿಗತಿಗಳು ತಿಳಿಯುತ್ತವೆ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದರು. ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು.
ಅತಿಥಿಯಾಗಿದ್ದ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ ಮಾತನಾಡಿ, ಮಾಧ್ಯಮವು ಜನರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಧಿಕಾರಿಗಳ ಕಣ್ಣು ಹಾಗೂ ಕಿವಿಯಾಗಿರುತ್ತದೆ ಎಂದರು. ಕಾರವಾರದಲ್ಲಿ ಮಾಧ್ಯಮದ ಬಗ್ಗೆ ಸಕಾರಾತ್ಮಕ ವಾತಾವರಣವಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಮಾಧ್ಯಮದ ಬೆಂಬಲವಿಲ್ಲದೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುವುದು ಕಷ್ಟ. ಸ್ವಾತಂತ್ರ್ಯ ಹೋರಾಟದಲ್ಲಿ ಮಾಧ್ಯಮದ ಕೊಡುಗೆ ಬಹಳಷ್ಟಿದೆ ಎಂದು ಸ್ಮರಿಸಿದರು. ಆಡಳಿತಾತ್ಮಕ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಧ್ಯಮ ಅತ್ಯಗತ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಸಂಘದಿಂದ ಹಿರಿಯ ಪತ್ರಕರ್ತರ ನಾಗರಾಜ ಹರಪನಹಳ್ಳಿ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕೇಂದ್ರ ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಾದ ಭರತ್ ರಾಜ್ ಕಲ್ಲಡ್ಕ, ದಿಲೀಪ್ ರೇವಣಕರ್ ಮತ್ತು ಎಸ್.ಎಸ್. ಸಂದೀಪ್ ಸಾಗರ್ ಅವರಿಗೆ ಟ್ಯಾಗೋರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿದ’ ಹರ್ಮನ್ ಮೊಗ್ಲಿಂಗ್ ‘ ಕನ್ನಡ ಪತ್ರಿಕೋದ್ಯಮದ ಜನಕ. ಆತನ ಕನ್ನಡ ಪ್ರೀತಿ ಅನನ್ಯ.ಪತ್ರಕರ್ತರು ಎಂದೂ ಮರೆಯಲಾಗದ ವ್ಯಕ್ತಿತ್ವ ಹರ್ಮನ್ ಮೊಗ್ಲಿಂಗನದು. ಈ ಮಹಾನ್ ವ್ಯಕ್ತಿಯ ಹೆಸರಿನ ಪ್ರಶಸ್ತಿ ಅಪಾರ ಖುಷಿ ನೀಡಿದೆ. ಆತ ಮಾಡಿದ ಕೆಲಸದಿಂದ ಆತನನ್ನು ನಾವು ಸದಾ ನೆನಪಿಸುತ್ತೇವೆ. ಮೊಗ್ಲಿಂಗ್ 1843 ರಲ್ಲಿ ಮಂಗಳೂರು ಸಮಾಚಾರ ಪ್ರಕಟಿಸಿದ. ಒಂದೇ ವರ್ಷದ ನಂತರ ಅದರ ಹೆಸರನ್ನು ಕನ್ನಡ ಸಮಾಚಾರ ಎಂದು ಬದಲಿಸಿದ. ಇದು ಆತನ ಕನ್ನಡ ಪ್ರೀತಿಯನ್ನು ತೋರಿಸುತ್ತದೆ ಎಂದರು. ಕನ್ನಡ ಸಾಹಿತ್ಯದ ವಿವಿಧ ಕೃತಿಗಳನ್ನು ಸಂಗ್ರಹಿಸಿ , ಪ್ರಕಟಿಸಿದ. ನಿಜವಾದ ಕನ್ನಡಿಗನಾಗಿ ಬದುಕಿದವ ಎಂದು, ಮೊಗ್ಲಿಂಗ್ ಬದುಕನ್ನು ಅವರು ಸ್ಮರಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಿಂದ ಅಜ್ಜಿಬಳ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ದೀಪಕ ಕುಮಾರ್ ಶೇಣ್ವಿ ಹಾಗೂ ಮೀಡಿಯಾ ಸಂಸ್ಥೆ ನೀಡುವ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಗೆ ಆಯ್ಕೆಗೊಂಡ R ಕನ್ನಡ ನ್ಯೂಸ್ ಚಾನಲ್ನ ಉತ್ತರ ಕನ್ನಡ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ಅವರನ್ನು ಇದೆ ಸಂರ್ಭದಲ್ಲಿ ಸನ್ಮಾನಿಸಲಾಯಿತು. ಇನ್ನೂ , ಕಾರವಾರ ನಗರಸಭೆಯ ಪೌರ ಕಾರ್ಮಿಕರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಶಿವಕುಮಾರ್ ಬಿ. ನ್ಯೂಸ್ 18 ಜಿಲ್ಲಾ ವರದಿಗಾರ ದರ್ಶನ್ ನಾಯ್ಕ, ಉಪಸ್ಥಿತರಿದ್ದರು. ಪತ್ರಿಕಾನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ್ ಸ್ವಾಗತಿಸಿದರು.ನ್ಯೂಸ್ ಫಸ್ಟ ವರದಿಗಾರ ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಅಧ್ಯಕ್ಷ, ಪವರ್ ಟಿವಿ ಜಿಲ್ಲಾ ವರದಿಗಾರ ಉದಯ ನಾಯ್ಕ ಬರ್ಗಿ ವಂದಿಸಿದರು…