ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತಾಲೂಕಿನ ಶಿರಸಿ ಯಲ್ಲಾಪುರ ರಸ್ತೆಯಲ್ಲಿರುವ ಬೈರುಂಬೆ ಬಳಿ ಇರುವ ಡಾ. ರೆಸಾರ್ಟ್‌ನಲ್ಲಿ ಅಂದರ್-ಬಾಹರ್ ಆಟವಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಹಾವೇರಿ ಹಾಗೂ ದಾವಣಗೆರೆ ಮೂಲದ 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ 5 ಕೋಟಿಯಷ್ಟು ನಗದು ಜಪ್ತಿ ಮಾಡಿದ್ದಾರೆನ್ನಲಾಗಿದೆ.
ಹಾವೇರಿ ಜಿಲ್ಲೆಯ ಭೀರಪ್ಪ ಕನಕಾಪುರ,ಪ್ರಶಾಂತ್ ಬೊಮ್ಮನಳ್ಳಿ, ನಾಗೇಶ ಆನವಟ್ಟಿ,ಸ್ವಾಮಿ ನಿಂಗಣ್ಣಹಳ್ಳಿ ಸೇರಿ ಹಲವರನ್ನ ಬಂಧಿಸಲಾಗಿದ್ದು, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ 20ಕ್ಕೂ ಅಧಿಕ ಕಾರುಗಳು ಜಪ್ತಿ ಮಾಡಲಾಗಿದೆ.ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ 5 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ, ಜೂಜಾಟದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಪೈಕಿ ಸುಮಾರು 20ಮಂದಿ ತಮ್ಮ ಬಳಿ ಇದ್ದ ಎಲ್ಲಾ ಹಣವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಶಿರಸಿ ಪೊಲೀಸರು ಹಾವೇರಿ ಹಾಗೂ ದಾವಣಗೇರಿ ಮೂಲದ 30ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ದಾಳಿಯ ಸಂದರ್ಭದಲ್ಲಿ 5 ಕೋಟಿ ನಗದು ಇರುವ ವಿಚಾರ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಾವೇರಿ ಜಿಲ್ಲೆಗೆ ಹೊಸ ಎಸ್ಪಿಯವರು ಬಂದ ಬಳಿಕ ಅಲ್ಲಿನ ಜೂಜಾಟಗಳನ್ನು ತಡೆಗಟ್ಟಲಾಗಿದೆ. ಈ ಕಾರಣದಿಂದ ಆಟಗಾರರು ಉತ್ತರ ಕನ್ನಡ ಜಿಲ್ಲೆಯತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ.
ಪೊಲೀಸರು ದಾಳಿ ನಡೆಸಿದ ದೃಶ್ಯಗಳು ಡಾ. ರೆಸಾರ್ಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಅದರಲ್ಲಿ ಆಟಗಾರರು ಪ್ರಭಾವಿಗಳು ಎಂಬುದು ಸ್ಪಷ್ಟವಾಗಿದೆ. ಬಂಧಿತರಾಗಿರುವವರೂ, ಪರಾರಿಯಾಗಿರುವ ಎಲ್ಲರೂ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯವರಾಗಿದ್ದಾರೆ.
ಈ ರೆಸಾರ್ಟ್‌ನಲ್ಲಿ ಕಳೆದ ಅನೇಕ ವರ್ಷಗಳಿಂದ ನಿತ್ಯವೂ ಅಂದರ್ ಬಾರ್ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ಅಂದರ್ ಬಾಹರ್ ಆಡಲು ಜಿಲ್ಲೆಯವರಿಗೆ ನೀಡಿದ್ದರೆ ಮಾಹಿತಿ ಸೋರಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಹೊರ ಜಿಲ್ಲೆಯವರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತಿತ್ತು ಎನ್ನಲಾಗಿದೆ.ಬಂಧಿತರಾಗಿರುವವರು ಹಾಗೂ ಪರಾರಿಯಾಗಿರುವ ಎಲ್ಲರೂ ಪ್ರಭಾವಿಗಳು ಎನ್ನಲಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಅದು ಓರ್ವ ಖಡಕ್ ಮಹಿಳಾ ಅಧಿಕಾರಿಯಿಂದ ನಡೆದ ಅತೀ ದೊಡ್ಡ ದಾಳಿ ಎನ್ನಲಾಗಿದೆ.