ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕೇಣಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಕಡಲಕೊರೆತ ಆಗದಂತೆ ವೈಜ್ಞಾನಿಕವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜೆಎಸ್‌ಡಬ್ಲ್ಯೂ ಕೇಣಿ ಪೋರ್ಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸಾದ್ ತಿಳಿಸಿದ್ದಾರೆ.

ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಕೇಣಿ ಬಂದರು ಸಂಪೂರ್ಣವಾಗಿ ಸಮುದ್ರ ಪ್ರದೇಶದಲ್ಲಿಯೇ ನಿರ್ಮಾಣವಾಗಲಿದ್ದು, ಇದರ ಪರಿಣಾಮವನ್ನು ವಿಶ್ಲೇಷಿಸಲು ಈಗಾಗಲೇ ವೈಜ್ಞಾನಿಕ ಸಮೀಕ್ಷೆಗಳು ಪ್ರಾರಂಭವಾಗಿದೆ. ಬ್ರೇಕ್‌ವಾಟರ್ ನಿರ್ಮಾಣದಿಂದ ಕರಾವಳಿಯ ಇತರೆ ಭಾಗಗಳಿಗೆ ಪರಿಣಾಮವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಕಡಲಕೊರೆತ ತಡೆಯಲು ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವನ್ನು ರೂಪಿಸಲಾಗುತ್ತಿದೆ,” ಎಂದು ವಿವರಿಸಿದರು.

ಉದ್ಯೋಗ ಸೃಷ್ಟಿಗೆ ಅವಕಾಶ:
ಬಂದರು ನಿರ್ಮಾಣದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದ್ದು, ಅವರಿಗೆ ಅಗತ್ಯ ತರಬೇತಿಯನ್ನು ಸಂಸ್ಥೆ ಒದಗಿಸಲಿದೆ. ಮೀನುಗಾರಿಕೆಗೆ ಯಾವುದೇ ತೊಂದರೆ ಆಗದಂತೆ ಯೋಜನೆ ರೂಪಿಸಲಾಗಿದ್ದು, ಮೀನುಗಾರರು ಬಂದರು ವ್ಯಾಪ್ತಿಯಿಂದ ನಿರಂತರವಾಗಿ ತಮ್ಮ ದೈನಂದಿನ ಮೀನುಗಾರಿಕೆಯಲ್ಲಿ ತೊಡಗಿಸಬಹುದಾಗಿದೆ ಎಂದು ಪ್ರಸಾದ್ ಹೇಳಿದರು.

ಈ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯೂನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ರೇಷ್ಮಾ ಉಳ್ಳಾಲ ಮಾತನಾಡಿ, “ಬಂದರು ಯೋಜನೆ ಕುರಿತು ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಮೀನುಗಾರರ ಪ್ರಮುಖರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ. ಅವರ  ಸಹಕಾರದೊಂದಿದೆ. ಮುಂದಿನ ಹಂತದಲ್ಲಿ ಮೀನುಗಾರ ಸಮುದಾಯದೊಂದಿಗೆ ಸ್ಪಷ್ಟ ಸಂವಹನ ನಡೆಸಲಾಗುತ್ತದೆ,” ಎಂದು ಹೇಳಿದರು.

ಕೇಣಿ ಖಾಸಗಿ ವಾಣಿಜ್ಯ ಬಂದರು ಯೋಜನೆ ಪ್ರಸ್ತುತ ವೈಜ್ಞಾನಿಕ ಅಧ್ಯಯನ ಹಂತದಲ್ಲಿದ್ದು, ಪರಿಸರ ಮತ್ತು ಸ್ಥಳೀಯರ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮದೊಂದಿದೆ ಜಾರಿಗೊಳಿಸಲು ಕಂಪನಿಯ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಅಹವಾಲು ಪಡೆಯುವ ಹಂತದಲ್ಲೂ ಎಲ್ಲರ ಸಹಕಾರ‌ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ:ನಾಳೆಯಿಂದ‌ ಕೋ‌ನಳ್ಳಿಯಲ್ಲಿ ಬ್ರಹ್ಮಾನಂದ ಸ್ವಾಮಿಜೀಗಳಿಂದ ಚಾತುರ್ಮಾಸ್ಯ ವೃತ

.