suddibindu.in
ದಾಂಡೇಲಿ : ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಂಡೇಲಿಯ ಸಿಪಿಐ ಭೀಮಣ್ಣ.ಎಂ.ಸೂರಿಯವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ಖಂಡಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿಯನ್ನು ನೀಡಿತು.
ಅಬ್ದುಲ್ ಕಲಾಂ ವಸತಿ ಶಾಲೆಯ ‘ಪ್ರಾಚಾರ್ಯರಾದ ವಿಶ್ವನಾಥ ಹುಲಸದಾರ ಅವರು ತಮಗೆ ಬೇಡ’ ಎಂದು ಶಾಲೆ ವಿದ್ಯಾರ್ಥಿಗಳು ನಿನ್ನೆ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದರು. ಶಾಲೆಗೆ ಆಗಮಿಸಿದ್ದ ಪ್ರಾಚಾರ್ಯರ ಕಾರನ್ನೂ ಸುತ್ತುವರೆದು ‘ನ್ಯಾಯ ಬೇಕು’ ಎಂದು ಘೋಷಣೆ ಕೂಗುತ್ತಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಪತ್ರಕರ್ತರ ಬಳಿ ತೆರಳಿ ‘ಪ್ರಾಚಾರ್ಯರು ನಮಗೆ ಜೀವ ಬೆದರಿಕೆ ಹಾಕಿದ್ದಾರೆ.ತನ್ನ ವಿರುದ್ದ ಮಾತನಾಡಿದರೆ ಚರ್ಮ ಸುಲಿಯುತ್ತೇನೆ ಎಂದಿದ್ದಾರೆ. ನಮ್ಮ ತಂದೆ-ತಾಯಿಯ ಬಗ್ಗೆ ಅವಾಚ್ಯವಾಗಿ ಬೈದಿದ್ದಾರೆ. ಈ ಪ್ರಾಚಾರ್ಯರು ನಮಗೆ ಬೇಡ. ನಮಗೆ ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು.‘ವಿದ್ಯಾರ್ಥಿಗಳಿಗೆ ಬೆದರಿಕೆ ನೀಡಿ, ತಂದೆ ತಾಯಿಗಳ ಬಗ್ಗೆ ಮಾತನಾಡಿದ ಪ್ರಾಚಾರ್ಯರು ಕ್ಷಮೆಯಾಚಿಸಲಿ’ ಎಂದು ಪೊಲೀಸರಲ್ಲಿ ಒತ್ತಾಯಿಸುತ್ತಿದ್ದರು.
ದಾಂಡೇಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಜೈನ್, ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಅಕ್ಷಯಗಿರಿ ಗೋಸಾವಿ, ಅಪ್ತಾಬ್ ಶೇಖ ಕೂಡಾ ಇದಕ್ಕೆ ಜೊತೆಯಾಗಿ ಪೊಲೀಸರಲ್ಲಿ ಒತ್ತಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ. ಭೀಮಣ್ಣ ಸೂರಿ ಅಲ್ಲಿಯ ವಾಸ್ತವವನ್ನು ತಿಳಿದುಕೊಳ್ಳದೇ, ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಮುನ್ನವೇ ಏಕಾ ಏಕಿ ಪತ್ರಕರ್ತರನ್ನು ಎಳೆದಾಡಿ ದರ್ಪ ತೋರಿಸಿದರು. ಇದೆಲ್ಲ ಮಾಡಲು ನೀವ್ಯಾರು. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ಇದೆಲ್ಲ ಮಾಡುತ್ತಿದ್ದೀರಿ’ ಎಂದು ಪತ್ರಕರ್ತರ ಮೇಲೆಯೇ ಏರಿ ಹೋದರು.
ಪತ್ರಕರ್ತರು ವಾಸ್ತವ ತಿಳಿಸುವ ಪ್ರಯತ್ನ ಮಾಡಿದರೂ ಸಿ.ಪಿ.ಐ. ಕೇಳಿಸಿಕೊಳ್ಳುವ ವ್ಯವದಾನ ತೋರಲಿಲ್ಲ. ಬದಲಾಗಿ ತಮ್ಮ ಅಳಲು ಹೇಳಿಕೊಂಡ ಬಂದ ವಿದ್ಯಾರ್ಥಿಗಳನ್ನೇ ಬೆದರಿಸಿದರು. ಪೊಲೀಸ್ ಬಲ ಉಪಯೋಗಿಸಿ ವಿವಾದಿತ ಪ್ರಾಚಾರ್ಯರನ್ನು ಅಲ್ಲಿಂದ ಕಳುಹಿಸುವ ಯತ್ನ ಮಾಡಿದರು.
ಕಾರಿನ ಒಳಗಡೆ ಕುಳಿತುಕೊಂಡಿದ್ದ ಪ್ರಾಚಾರ್ಯರನ್ನು ಕೆಳಗಿಳಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸಬೇಕಿದ್ದ ಸಿ.ಪಿ.ಐ. ಭೀಮಣ್ಣ ಸೂರಿಯವರು ಅದನ್ನು ಮಾಡದೇ, ವಿದ್ಯಾರ್ಥಿಗಳ ಸಮಸ್ಯೆಯನ್ನೂ ಆಲಿಸದೇ, ಒಬ್ಬ ವಿವಾದಿತ ಪ್ರಾಚಾರ್ಯರ ರಕ್ಷಣೆಗೆ ಮುಂದಾಗಿ, ಸ್ಥಳದಲ್ಲಿದ್ದ ಪತ್ರಕರ್ತರು ಹಾಗೂ ಜನಪ್ರತಿನಿದಿಗಳ ಮೇಲೆಯೇ ರೇಗಾಡಿ, ‘ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿ, ಜೀಪ್ ಮೇಲೆ ಅವರನ್ನು ತುಂಬಿ’ ಎಂದೆಲ್ಲಾ ಏರು ಧ್ವನಿಯಲ್ಲಿ ಹೇಳಿದರು. ಇದು ಪತ್ರಕರ್ತರಿಗೆ ಮಾಡಿದ ಅವಮಾನ ಹಾಗೂ ಪೊಲೀಸ್ ದೌರ್ಜನ್ಯ ಎಂದೇ ಹೇಳಬೇಕಾಗುತ್ತದೆ.
ಸಮಾಜದಲ್ಲಿ ಪತ್ರಕರ್ತರೂ ಕೂಡಾ ಗೌರವದ ಸ್ಥಾನದಲ್ಲಿಯೇ ಇದ್ದವರು. ದಿನದ 24 ಗಂಟೆಗಳ ಕಾಲ ಜಾಗೃತರಾಗಿದ್ದು ಸುದ್ದಿ ನೀಡುವವರು. ಅವರೂ ಸಹ ಸುದ್ದಿ ಮಾಡುವಾಗ ಕರ್ತವ್ಯ ನಿರತರೇ ಆಗಿರುತ್ತಾರೆ. ಪತ್ರಕರ್ತರಿಗೂ ಕೂಡಾ ಬರೆಯಲು ಹಾಗೂ ಮಾತನಾಡಲು, ಅನ್ಯಾಯ ವಿರೋಧಿಸಲು ಸಂವಿದಾನ ಬದ್ಧ ಹಕ್ಕಿದೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿದ್ದ ಸಿ.ಪಿ.ಐ. ಭೀಮಣ್ಣ.ಎಂ.ಸೂರಿ ಅವರು ಅಧಿಕಾರದ ದರ್ಪ ತೋರಿಸಿ, ಪತ್ರಕರ್ತರನ್ನು ಎಳೆದಾಡಿ, ಏರು ಧ್ವನಿಯಲ್ಲಿ ಬೈದಾಡಿರುವುದು ಬೇಸರ ತಂದಿದೆ.
ಈ ಘಟನೆಯ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡಿ, ಮಾತುಕತೆ ನಡೆಸಿ, ಅಥವಾ ಕಾನೂನು ರೀತಿಯಲ್ಲಿ ಸಮಸ್ಯೆ ಪರಿಹರಿಸಬೇಕಿದ್ದ ಪೊಲೀಸ್ ಅಧಿಕಾರಿಯೇ ಕಾನೂನು ಸುವ್ಯವಸ್ಥೆ ಹದಗೆಡುವಂತಹ ವಾತಾವರಣಕ್ಕೆ ಎಡೆಮಾಡಿಕೊಟ್ಟಿರುವುದು ಖಂಡನೀಯವಾಗಿದೆ. ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘ ಈ ವಿಚಾರವನ್ನು ತೀವ್ರವಾಗಿ ಖಂಡಿಸುತ್ತದೆ.
ಈ ಘಟನೆಯ ಕುರಿತಂತೆ ಪತ್ರಕರ್ತರನ್ನು ಎಳೆದಾಡಿ ದರ್ಪ ತೋರಿಸಿದ ಸಿ.ಪಿ.ಐ. ಭೀಮಣ್ಣ.ಎಂ.ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ವರದಿ ಮಾಡಲು ತೆರಳುವ ಸಂವಿಧಾನದ ನಾಲ್ಕನೆಯ ಅಂಗವೆಂದೇ ಹೇಳಲಾಗುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಕೊಡುವ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ್ ಎಸ್.ಜೈನ್, ಉಪಾಧ್ಯಕ್ಷರಾದ ಕೃಷ್ಣ ಪಾಟೀಲ್, ಪ್ರಧಾನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಅಕ್ಷಯಗಿರಿ ಗೋಸಾವಿ, ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಯು.ಎಸ್.ಪಾಟೀಲ್, ಸಂಘದ ಸದಸ್ಯರುಗಳಾದ ಬಿ.ಎನ್ ವಾಸರೆ, ರಾಜೇಶ್ ತಳೇಕರ್, ಪ್ರವೀಣಕುಮಾರ್ ಸುಲಾಖೆ, ಅಪ್ತಾಬ್ ಶೇಖ ಉಪಸ್ಥಿತರಿದ್ದರು.
ಇದನ್ನೂ ಓದಿ
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು